ಉಜಿರೆ: ಮಂಗಳೂರಿನ ನಿಟ್ಟೆ ಸಮೂಹ ಸಂವಹನ ಕಾಲೇಜಿನಲ್ಲಿ ನಡೆದ ಬೀಕನ್ಸ್-2017 ಮಾಧ್ಯಮೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ.ನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ತಂಡವು ಸಮಗ್ರ ಪ್ರಶಸ್ತಿ ಗಳಿಸಿದೆ.
ನಿಟ್ಟೆ ಕಾಲೇಜು ಪನೀರ್ ಕ್ಯಾಂಪಸ್ ನಲ್ಲಿ ನಡೆದ ಮಾಧ್ಯಮೋತ್ಸವದಲ್ಲಿ ವಿವಿಧ ರಾಜ್ಯಗಳ 23ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಿದ್ದವು. ಒಟ್ಟು 15 ಸ್ಪರ್ಧೆಗಳಲ್ಲಿ 4 ಪ್ರಥಮ ಹಾಗೂ 4 ದ್ವೀತಿಯ ಪಶಸ್ತಿ ಗಳಿಸಿ, ಎಸ್.ಡಿ.ಎಂ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಪವಿತ್ರ ಬಿದ್ಕಲ್ಕಟ್ಟೆ ‘ಲೈವ್ ರಿಪೋರ್ಟಿಂಗ್’ ಮತ್ತು ‘ಜಸ್ಟ್ ಎ ಮಿನಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೃಷ್ಣ ಪ್ರಶಾಂತ್.ವಿ, ಫೇಸ್ ಪೇಂಟಿಂಗ್ ನಲ್ಲಿ ಸುಷ್ಮಾ ಉಪ್ಪಿನ್ ದ್ವೀತಿಯ ಸ್ಥಾನ ಗಳಿಸಿದರೆ, ಛಾಯಾ ವೀರಾ ಮತ್ತು ಚೈತನ್ಯ ತಂಡ ‘ಕ್ರೈಸಿಸ್ ಮ್ಯನೇಜ್ಮೆಂಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿತು. ತಂಡವಾರು ಸ್ಪರ್ಧೆಗಳಲ್ಲಿ ಮೂಕಾಭಿನಯ ಪ್ರಥಮ ಸ್ಥಾನ ಪಡೆದರೆ, ಥೀಮ್ಡ್ಯಾನ್ಸ್ ಹಾಗೂ ಐಸ್ ಬ್ರೇಕರ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಮಗ್ರ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಕಿರಿಕ್ ಪಾರ್ಟಿ ಸಿನಿಮಾದ ಸಹ ನಿರ್ದೇಶಕ ಕಿರಣ್ ರಾಜ್ ನೀಡಿದರು.