ಪುತ್ತೂರು: ಹತ್ತು ವರ್ಷದ ಹಿಂದೆ ಈ ಪ್ರದೇಶ ಮೊರೆಕಲ್ಲಿನಿಂದ ಆವೃತ್ತಗೊಂಡ ಬರಡು ಭೂಮಿ. 10 ವರ್ಷದ ಹಿಂದೆ ಇಲ್ಲಿಗೆ ಆಗಮಿಸಿದ ಕೃಷಿ ವಿಜ್ಞಾನಿಗಳು ಮೊರಕಲ್ಲಿನಲ್ಲಿ ಹಸಿರಿಕರಣ ಅಸಾಧ್ಯ ಎಂದು ತಿಳಿಸಿ ಮರಳಿದ್ದರು. ಆದರೆ ಹತ್ತು ವರ್ಷದ ಆನಂತರ ಭೇಟಿ ಇತ್ತ ಕೃಷಿ ವಿಜ್ಞಾನಿಗಳು ಇಲ್ಲಿನ ಕೃಷಿ ಚಟುವಟಿಕೆ ಹಾಗೂ ಭೂಮಿ ಫಲವತ್ತತೆಗೊಳಿಸುವ ತಂತ್ರಜ್ಞಾನ ಕಂಡು ನಿಬ್ಬೆರಗಾಗಿದ್ದಾರೆ..!
ಹತ್ತು ವರ್ಷಗಳಿಂದ ತನ್ನ 5.5 ಎಕರೆ ಬರಡುಭೂಮಿಯಲ್ಲಿ ನೂರಾರು ಇಂಗುಂಡಿ ನಿರ್ಮಿಸಿ, ಮೊರಕಲ್ಲಿನಲ್ಲೂ ಕೃಷಿ ಚಟುವಟಿಕೆ ಯಶಸ್ವಿಯಾಗಿ ನಡೆಸಲು ಸಾಧ್ಯ ಎಂಬುದನ್ನು ನಿರೂಪಿಸಿದ, ಪ್ರಗತಿಪರ ಕೃಷಿಕ ಪ್ರಶಸ್ತಿ ಪುರಸ್ಕೃತ, ಸರ್ವೇ ಸಮೀಪದ ನಿಸರ್ಗ ನಿಲಯದ ಕೃಷಿಕ ಅಣ್ಣು ಪೂಜಾರಿ ಅವರ ಯಶೋಗಾಥೆಯಿದು.
ಕೃಷಿಗೆ ಜೈ:
ಖಾಸಗಿ ಬಸ್ ಕಂಡೆಕ್ಟರ್ ವೃತ್ತಿಗೆ ಹತ್ತು ವರ್ಷದ ಹಿಂದೆ ವಿದಾಯ ಹೇಳಿ ಅಕ್ರಮ ಸಕ್ರಮದಿಂದ ಪಡೆದ ಬರಡು ಭೂಮಿಯಲ್ಲೆ ಕೃಷಿ ಚಟುವಟಿಕೆ ನಡೆಸಲು ತೊಡಗಿದ ಅಣ್ಣು ಪೂಜಾರಿಗೆ ಅರಂಭದಲ್ಲಿ ಯಶಸ್ಸು ಸಿಗಲಿಲ್ಲ. ಈ ಸಂದರ್ಭ ತನ್ನ ಜಮೀನಿನ ಸಮೀಪವಿರುವ ಗುಡ್ಡದ ಇಳಿಜಾರಿಗೆ ಇಂಗುಗುಂಡಿ ನಿರ್ಮಿಸಿ ನೀರಿನ ಹರಿವನ್ನು ತಡೆದು ಇಂಗಿಸಿದರು. ಗುಡ್ಡದಲ್ಲಿ ಗೇರು ಗಿಡ ಬೆಳೆಸಿದರು. ಹೀಗೆ ಮುಂದುವರಿದು ತನ್ನ ಜಮೀನಿನ ಎಲ್ಲಾ ಭಾಗದಲ್ಲೂ 100 ಕ್ಕೂ ಅಧಿಕ ಇಂಗುಗುಂಡಿ ನಿರ್ಮಿಸಿ ತೆಂಗು, ಅಡಕೆ ಬೆಳೆದರು. ಪ್ರಸ್ತುತ ಸಾವಿರಕ್ಕೂ ಅಧಿಕ ಅಡಕೆ, 150 ತೆಂಗು, 100 ಗೇರು ಸೇರಿದಂತೆ ಮಿಶ್ರಕೃಷಿಯಲ್ಲಿ ತೊಡಗಿದ್ದಾರೆ.
ಮಿಶ್ರತಳಿ ಪ್ರಯೋಗ ಯಶಸ್ವಿ ಕೃಷಿಕ ಅಣ್ಣ್ಪು ಪೂಜಾರಿಯವರ ಮಿಶ್ರತಳಿ ಪ್ರಯೋಗ ಯಶಸ್ವಿಯಾಗಿದ್ದು, ಕುದನೆ ಗಿಡಕ್ಕೆ ಬದನೆ ಕಸಿ ಮಾಡಿ 2 ವರ್ಷ ಫಲ ಪಡೆಯಬಹುದು ಎಂಬುದನ್ನು ನಿರೂಪಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನಡೆಯುವ, ಜನರಿಗೆ ಗೇರು ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. 1 ಗಿಡದಲ್ಲಿ 2 ತಳಿಯ ಫಲ ನೀಡುವ ಕೋಕೊ, 1 ಮಾವಿನ ಮರದಲ್ಲಿ 6 ತಳಿಯ ಮಾವು, ವಿವಿಧ ತರಕಾರಿ, ಮಿಶ್ರಬೆಳೆಯಾಗಿ ಕಾಳುಮೆಣಸು, ಬಾಳೆ ಬೆಳೆ ಇವರ ನಿಸರ್ಗದೊಳಗಿರುವ ವಿಶೇಷತೆಗಳು.
ನಾನಿಲ್ ಜಾತಿಯ ಕಾಡುಗಿಡಕ್ಕೆ ಚಿಕ್ಕು ಗಿಡ ಕಸಿ ಮಾಡಿ ಅಧಿಕ ಪ್ರಮಾಣದ ಚಿಕ್ಕು ಪಡೆಯುತ್ತಿದ್ದಾರೆ. ಅಡಕೆ ಮಿಶ್ರ ತಳಿಗಳನ್ನು ಒಂದೇ ಪ್ರದೇಶದಲ್ಲಿ ನೆಡುವುದರಿಂದ ಸಮಾನ ಪರಾಗಸ್ಪರ್ಶ ಮೂಲಕ ಅಧಿಕ ಇಳುವರಿ ಪಡೆಯಬಹುದು. ಗೇರು, ಮಾವು ಹಾಗೂ ಇತರ ಯಾವುದೇ ವಾಣಿಜ್ಯ ಆದಾಯ ನೀಡುವ ಗಿಡಗಳನ್ನು ಪುನಚ್ಚೇತನ ತಂತ್ರಜ್ಞಾನದ ಮೂಲಕ ಹೊಸ ತಳಿ ಅಭಿವೃದ್ದಿ ಪಡಿಸಿದ್ದೇನೆ. ನರ್ವಲ್ ಜಾತಿಯ ಗಿಡಕ್ಕೆ ರಂಬುಟನ್ತಳಿ ಕಸಿ ನಡೆಸಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೃಷಿಕ ಅಣ್ಣ್ಪು ಪೂಜಾರಿ ತಿಳಿಸಿದ್ದಾರೆ.
ಪುನಚ್ಚೇತನ ತಂತ್ರಜ್ಞಾನ:
ಗಿಡದ ಕಾಂಡವನ್ನು ಜೀವಂತವಾಗಿ ಉಳಿಸಿ ಕಾಂಡದ ಚಿಗುರಿಗೆ ಹೊಸ ತಳಿಯ ಕಸಿ ನಡೆಸಿ ಗಿಡ ಬೆಳೆಸುವ ಪ್ರಕ್ರೀಯೆ ಪುನಚ್ಚೇತನ ತಂತ್ರಜ್ಞಾನ. ಅಗತ್ಯ ಪರಿಕರಗಳ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೃಷಿ ವಿಜ್ಞಾನಿಗಳು ಈ ಪ್ರಯೋಗ ನಡೆಸುವುದು ಸಾಮಾನ್ಯ. ಆದರೆ ಸ್ಥಳೀಯ ಪರಿಕರಗಳಿಂದಲೇ ಪುನಚ್ಚೇತನ ತಂತ್ರಜ್ಞಾನದಲ್ಲಿ ಕೃಷಿಕ ಅಣ್ಣ್ಪು ಪೂಜಾರಿ ಅವರು ತಳಿ ಅಭಿವೃದ್ದಿಪಡಿಸಿರುವುದು ವಿಶೇಷ.
ಬರಡು ಭೂಮಿಯಲ್ಲಿ ಜಲಮರುಪೂರಣ ಗೊಳಿಸುವುದರಿಂದ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಮಣ್ಣಿನ ಭೌತಿಕ ಅಂಶಗಳಾದ ಸಾರಜನಕ, ರಂಜಕ ಹಾಗೂ ಪೊಟಾಸಿಂ ಕಡಿಮೆಯಾಗುತ್ತಿರುತ್ತದೆ. ಕೇವಲ ಸಾವಯುವ ಗೊಬ್ಬರದಿಂದ ಗಿಡ ಬೆಳವಣಿಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗೆ ಸಂಧರ್ಭ ಸಾವಯುವ ಗೊಬ್ಬರದ ಜತೆಗೆ ಮಿತ ಪ್ರಮಾಣದ ಎನ್ಪಿಕೆ ಗೊಬ್ಬರ ಅಗತ್ಯ.