ಸುಳ್ಯ: ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಜಿನ್ನಪ್ಪ ಪರವನನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳವಾರ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಿಂದ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಂದ ಬಂಧಿತನಾಗಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ಬೆಳ್ತಂಗಡಿ ತಾಲೂಕು ಗರ್ಡಾಡಿ ಬೋಳ್ಕಲ್ಲುಗುಡ್ಡದ ಜಿನ್ನಪ್ಪ ಪರವ(43) ಮಾ.10 ರಂದು ಪರಾರಿಯಾಗಿದ್ದ. ಮುಂಜಾನೆ 3.30ರ ವೇಳೆಗೆ ಜೈಲಿನಲ್ಲಿ ಅಡುಗೆ ತಯಾರಿಸುತ್ತಿದ್ದ ಸಂದರ್ಭದಲ್ಲಿ ಈತ ಎಸ್ಕೇಪ್ ಆಗಿದ್ದ. ಈ ಕುರಿತು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು ಕಳೆದ ನಾಲ್ಕು ದಿನದಿಂದ ಪೊಲೀಸರು ಈತನಿಗಾಗಿ ವ್ಯಾಪಕ ಹುಡುಕಾಟ ನಡೆಸಿದ್ದರು.
ಎರಡು ದಿನಗಳ ಕಾಲ ವಿವಿಧ ಕಡೆಗಳಲ್ಲಿ ಸುತ್ತಾಡಿದ್ದ ಜಿನ್ನಪ್ಪ ಮಾ.12 ರಂದು ಕಂದ್ರಪ್ಪಾಡಿಯ ಸಂಬಂಧಿಕರ ಮನೆಗೆ ಬಂದಿದ್ದ. ಕಂದ್ರಪ್ಪಾಡಿಯಲ್ಲಿ ನಡೆಯುವ ನೇಮೋತ್ಸವದ ಕೆಲಸದಲ್ಲಿ ನಿರತನಾಗಿದ್ದ ಈತನನ್ನು ಖಚಿತ ಮಾಹಿತಿಯ ಮೇರೆಗೆ ಸುಳ್ಯ ಠಾಣೆಯ ಎಸ್.ಐ ಹೆಚ್.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಎಎಸ್ಐ ಕೃಷ್ಣಯ್ಯ.ಕೆ, ಸಿಬ್ಬಂದಿಗಳಾದ ಸುಚಿನ್, ಪುನೀತ್ ಕುಮಾರ್, ಅಶೋಕ್ ಕುಮಾರ್ ಕಾರ್ಯಾಚರಣೆ ನಡೆಸಿ ಮಂಗಳವಾರ ಹಗಲು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಬರ್ಕೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಸುಳ್ಯ ಎಸ್ಐ ಚಂದ್ರಶೇಖರ್ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟು ವಿಚಾರಣಾಧೀನ ಕೈದಿಯಾಗಿ ಒಂದೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಜಿನ್ನಪ್ಪನಿಗೆ ಜಾಮೀನು ದೊರತಿರಲಿಲ್ಲ.