News Kannada
Thursday, February 02 2023

ಕರಾವಳಿ

ಹನ್ನೆರಡು ವರ್ಷಗಳಿಗೊಮ್ಮೆ ಸ್ವಯಂ ಭೂ ಗುಹಾ ಯಾತ್ರೆ: ಕರ್ನಾಟಕ-ಕೇರಳ ರಾಜ್ಯದ ಗಡಿ ಚೆಂಡತ್ತಡ್ಕದಲ್ಲಿ ಜಾಂಬ್ರಿ ಉತ್ಸವ

Photo Credit :

ಹನ್ನೆರಡು ವರ್ಷಗಳಿಗೊಮ್ಮೆ ಸ್ವಯಂ ಭೂ ಗುಹಾ ಯಾತ್ರೆ: ಕರ್ನಾಟಕ-ಕೇರಳ ರಾಜ್ಯದ ಗಡಿ ಚೆಂಡತ್ತಡ್ಕದಲ್ಲಿ ಜಾಂಬ್ರಿ ಉತ್ಸವ

ಪುತ್ತೂರು: ಪುತ್ತೂರು-ಪಾಣಾಜೆ ಮಾರ್ಗದಿಂದ ಭರಣ್ಯ-ಗಿಳಿಯಾಲು ಮೂಲಕ ಸಾಗಿದರೆ ಚೆಂಡೆತ್ತಡ್ಕ. ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಈ ದಟ್ಟ ಅರಣ್ಯದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಜಾಂಬ್ರಿ(ಸ್ವಯಂ ಭೂ ಗುಹಾ ಯಾತ್ರೆ) ಉತ್ಸವ ಈ ಬಾರಿ ಮೇ 2 ಕ್ಕೆ  ನಡೆಯಲಿದೆ. ಉಭಯ ರಾಜ್ಯಗಳ ಲಕ್ಷಾಂತರ ಭಕ್ತರು ಸಮಾಗಮಗೊಳ್ಳುವ ಇಲ್ಲಿನ ಉತ್ಸವಕ್ಕೆ ಇನ್ನೆರಡೇ ತಿಂಗಳು ಉಳಿದಿದೆ.

ಹನ್ನೆರಡು ವರ್ಷಕ್ಕೊಮ್ಮೆ ಜಾಂಬ್ರಿ
ಕೇರಳ ಗಡಿ ಗ್ರಾಮದ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೂ, ಈ ಜಾಂಬ್ರಿ ಗುಹೆ ಪ್ರವೇಶೋತ್ಸವಕ್ಕೆ ವಿಶೇಷ ಸಂಬಂಧವಿದೆ. ಇಲ್ಲಿನ ಮಹಾಲಿಂಗೇಶ್ವರನ ಮೂಲ ಗವಿಯೇ ಈ ಜಾಂಬ್ರಿ ಗುಹೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಗುಹಾ ಪ್ರವೇಶಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. 2005 ರಲ್ಲಿ ಜಾಂಬ್ರಿ ಉತ್ಸವ ನಡೆದು ಹನ್ನೆರಡು ವರ್ಷ ಕಳೆದಿದೆ. ಜಾಂಬ್ರಿ ಇರುವ ಉತ್ಸವದ ವರ್ಷದ ಜಾತ್ರೆಯ ಕೊನೆಯ ದಿನ ದೇವರಲ್ಲಿ ಅನುಮತಿ ಪಡೆದುಕೊಳ್ಳುವ ಸಂಪ್ರದಾಯವಿದೆ. ಜಾಂಬ್ರಿ ಉತ್ಸವದಲ್ಲಿ ತಂತ್ರಿಗಳು, ಓರ್ವ ಸ್ಥಾನಿಕ ಹಾಗೂ ಇಬ್ಬರು ಕಾಪಾಡರು ಪ್ರಧಾನರು. ತಂತ್ರಿಗಳು ಕುಂಟಾರು ಮನೆತನದವರು, ಕಾಪಾಡರೆಂದರೆ ವೃತಧಾರೀ ಮೂಲ ನಿವಾಸಿಗಳು. ಕಾಪಾಡರು ದೇವರಲ್ಲಿ ಅನುಮತಿ ಪಡೆದು 48 ದಿನ ವೃತದಲ್ಲಿ ತೊಡಗುತ್ತಾರೆ. ಸರ್ವಾಂಗ ತ್ಯಜಿಸಿ, ಹೊಸ ರಿಸಿನೊಂದಿಗೆ ಶುಚಿತ್ವದಲ್ಲಿ ದೇವಾಲಯದ ಪರಿಸರದಲ್ಲಿ ಗುಡಾರ ನಿರ್ಮಿಸಿ ವಾಸ ಮಾಡುವುದು ಸಂಪ್ರದಾಯ. ಕಾಪಾಡರಿಗೆ ವಿವಾಹ, ಮರಣಪೂರ್ವ ಉತ್ತರಕ್ರಿಯಾಗಳನ್ನು ನಡೆಸಲಾಗುತ್ತದೆ. ದೇವಾಲಯದಿಂದ ಒದಗಿಸಿದ ಆಹಾರವನ್ನು ಸೇವಿಸುವ ಸಂಪ್ರದಾಯವಿದೆ. ತಂತ್ರಿಗಳು, ಸ್ಥಾನಿಕರು ವೃರಿಗಳಾಗಿ ಶಿವ ನಾಮ ಸ್ಮರಣೆಯೊಂದಿಗೆ ದೇವಾಲಯದಲ್ಲಿಯೇ ಇರುತ್ತಾರೆ.

ಗುಹಾ ಪ್ರವೇಶ
ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಹೊರಟು, ಪೂರ್ತಿ ಶ್ವೇತಾಂಬರಿಗಳಾಗಿ, ಬೆಳ್ಳುಸಳ್ಳೆ ಸೂಪ್ಪಿನ ಸೂಡಿ ಧರಿಸಿಕೊಂಡು ಕಾಪಾಡರು ಗುಹೆಯೊಳಗೆ ಪ್ರವೇಶ ಮಾಡುತ್ತಾರೆ. ಬೆಳಕಿಗಾಗಿ ದೊಂದಿಗಳನ್ನು ಬಳಸುತ್ತಾರೆ. ಈ ದೀವಟಿಗೆಗಳನ್ನು ಕುಳದ ಮನೆತನದವರು ಉರಿಸಿಕೊಡುವುದು ಸಂಪ್ರದಾಯದೊಂದಿಗೆ ಎಳ್ಳೆಣ್ಣೆಯನ್ನು ಬಿದಿರಿನ ಅಂಡೆಗಳಲ್ಲಿ ಕೊಂಡೊಯ್ಯುತ್ತಾರೆ. ಗುಹಾ ಪ್ರವೇಶದ ಅನಂತರ ಒಂದುವರೆ ತಾಸಿನ ಅನಂತರ ಮರಳುತ್ತಾರೆ. ಗುಹಾ ಪ್ರವೇಶದ ಸಂದರ್ಭದಲ್ಲಿ ಕಾಪಾಡರು ಭಕ್ತಿ ಪರವಶರಾಗಿ ಗುಹೆಯೊಳಗೆ ಹೊರಳಾಡುತ್ತಾರೆ. ಗುಹೆಯಿಂದ ಮರಳಿ ಬರುವ ವೇಳೆ ಬಿಳಿ ಬಟ್ಟೆಯ ಮಾರಾಪು ಅನ್ನು ಮುಂಡೂರು ವನದಲ್ಲಿ ಹೂಳುತ್ತಾರೆ. ಕಾಪಾಡರು ಗವಿಯಿಂದ ಬಂದ ಅನಂತರ ಸ್ಥಾನಿಕರು ಕೈ ದೀಪದೊಂದಿಗೆ ತಂತ್ರಿಗಳಿಗೆ ದಾರಿ ತೋರಿಸುತ್ತಾರೆ. ವಿ-ವಿಧಾನ ಪೂರೈಸಿದ ಅನಂತರ ಒಂದುವರೆ ತಾಸಿನ ಬಳಿಕ ತಂತ್ರಿವರ್ಯರು ಮರಳಿ ಬರುತ್ತಾರೆ. ಕಾಪಾಡಾರು, ತಂತ್ರಿಗಳು ಗವಿಯೊಳಗಿನ ಅವರ ಕಾರ್ಯಗಳ ಬಗ್ಗೆ ಇತರರಿಗೆ ಹೇಳಬಾರದು. ಉಳಿದವರಿಗೆ ಅದನ್ನು ಹೇಳಬಾರಷ್ಟು ಗೌಪ್ಯತೆ ಕಾಪಾಡಿಕೊಳ್ಳಬೇಕು.

ಜಾಂಬ್ರಿ ಗುಹೆಯ ಹಿನ್ನಲೆ
ಪುರಾಣದಲ್ಲಿನ ಕಥೆಯಿದು. ತ್ರೇತಾಯುಗದಲ್ಲಿ ಖರನ ಸಹಸ್ರ ವರ್ಷಗಳ ತಪ್ಪಸ್ಸಿಗೆ ಶಿವನು ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ. ಆಗ ಖರನು ಲೋಕದಲ್ಲಿ ನಿತ್ಯವೂ ಶಿವಾರ್ಚನೆ ನಡೆಯಬೇಕು. ಅದಕ್ಕಾಗಿ ಶಿವಲಿಂಗವನ್ನು ದಯಪಾಲಿಸಬೇಕೆನ್ನುತ್ತಾನೆ. ಆತನ ಕೋರಿಕೆಯಂತೆ ಪರಶಿವನು ಮೂರು ಶಿವಲಂಗವನ್ನು ಖರನ ಕೈಗಿತ್ತು, ಗುಹಾ ಮಾರ್ಗವಾಗಿ ಮುಂದುವರಿ. ನಿನ್ನ ರಾಜ್ಯ ಸೇರದೆ ಹೊರ ಪ್ರಪಂಚವನ್ನು ತಲೆ ಎತ್ತಿ ನೋಡಬೇಡ. ನೋಡಿದೆಯೇ ಆದರೆ ಈ ಲಿಂಗಗಳನ್ನು ಅಲ್ಲಿಯೇ ಇರಿಸತಕ್ಕದ್ದು ಎನ್ನುತ್ತಾನೆ. ಅದರಂತೆ ಖರನು ಒಂದು ಶಿವಲಿಂಗವನ್ನು ಎಡಗೈಯಲ್ಲಿ, ಒನ್ನೊಂದನ್ನು ಬಲಗೈಯಲ್ಲಿ, ಮೂರನೆಯದನ್ನು ಬಾಯಲ್ಲಿ ಇರಿಸಿ, ಗುಹಾ ಮಾರ್ಗವಾಗಿ ಪ್ರಯಾಣ ಮುಂದುವರಿಸುತ್ತಾನೆ. ಅನೇಕ ಹಗಲು-ಇರುಳು ಸರಿದಿತ್ತು.
ಖರನಿಗೆ ರಾಜ್ಯ ತಲುಪಿದ ಭಾವನೆ ಮೂಡಿತ್ತು. ಶಿವಧ್ಯಾನದಿಂದ ವಿಮುಖನಾಗಿ ಹೊರ ಪ್ರಪಂಚ ಕಂಡ. ಶಿವಲಿಂಗದ ಭಾರ ಅಧಿಕವಾಯಿತು. ಶಿವಲಿಂಗವು ಜಾರಿತು. ಆ ವೇಳೆ ಅಶರೀವಾಣಿ ಕೇಳಿ ಬಂದ ಪ್ರಕಾರ ಗುಳಿಗನು ಶಂಖವಾಳನಾಗಿ ಖರನ ಮಾರ್ಗದರ್ಶನಕ್ಕೆ ಬರುತ್ತಾನೆ. ಖರನು ಎಡಗೈ ಲಿಂಗವನ್ನು ಬೆಟ್ಟಂಪಾಡಿಯಲ್ಲಿ, ಬಲಗೈ ಲಿಂಗವನ್ನು ಆಲಂಗೂಡ್ಲನಲ್ಲಿ ಪ್ರತಿಷ್ಠಾಪಿಸಿದನು. ಬಾಯೊಳಗಿದ್ದ ಶಿವಲಿಂಗವೂ ಮಾಯವಾದ ಸ್ಥಳದಿಂದ ಒಂದು ಹರದಾರಿಯಷ್ಟು ಪೂರ್ವ ಬಯಲಿನ ಮಧ್ಯೆ ಪ್ರತ್ಯಕ್ಷವಾಗಿರುತ್ತದೆ. ಆ ಸ್ಥಳವೇ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಕಾಶಿಯಿಂದ ಹೊರಟ ಖರನು ಗವಿಯಿಂದ ಹೊರಗೆ ಬಂದ ಸ್ಥಳವೇ ಚೆಂಡೆತ್ತಡ್ಕದ ಜಾಂಬ್ರಿ ಗುಹೆ ಇರುವ ಸ್ಥಳ.

See also  ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಸ್ಕೂಟರ್‌ ಗೆ ಕಾರು ಢಿಕ್ಕಿ ; ಮಹಿಳೆ ಸಾವು

ಕೇರಳ-ಕರ್ನಾಟಕದ ಭಾಗ
ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಇರುವ ಸ್ಥಳ ಕೇರಳಕ್ಕೆ ಸೇರಿದೆ. ಜಾಂಬ್ರಿ ಗುಹೆ ಇರುವ ಚೆಂಡೆತ್ತಡ್ಕ ಅರಣ್ಯ ಪ್ರದೇಶ ಕರ್ನಾಟಕಕ್ಕೆ ಸೇರಿದೆ. ಮೇ.2 ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಅನಂತರ ನಾಲ್ಕು ಕಿ.ಮೀ. ದೂರದ ಚೆಂಡೆತ್ತಡ್ಕ  ಶ್ರೀ ದೇವರ ಮೂಲ ಗವಿಯತ್ತ ಯಾತ್ರೆ ಹೊರಡುತ್ತದೆ.  ಮಾರ್ಗ ಮಧ್ಯದಲ್ಲಿ ಮುಂಡಾಸು ಶಾಸ್ತಾರ ವನದಲ್ಲಿ ಪೂಜೆ ಸಲ್ಲಿಸಿ ಜಾಂಬ್ರಿಯತ್ತ ಸಂಚಾರ ಮುಂದುವರಿಯುತ್ತದೆ. ಅಲ್ಲಿ ಗುಹಾ ಪ್ರವೇಶಾ ಕಾರ್ಯ ಅನಂತರ ದೇವಾಲಯಕ್ಕೆ ಬಂದು ಪ್ರಸಾದ ವಿತರಣೆ ನಡೆಯುತ್ತದೆ. ಮರು ದಿನ ಜಾತ್ರೆ ಸಂಪನ್ನಗೊಳ್ಳುತ್ತದೆ. ದ.ಕ ಜಿಲ್ಲೆಯಿಂದ ತೆರಳುವ ಭಕ್ತರೂ ಪುತ್ತೂರು ಮೂಲಕ ಪಾಣಾಜೆಗೆ ತೆರಳಿ, ಅಲ್ಲಿಂದ ಭರಣ್ಯ-ಗಿಳಿಯಾಲು ಮಾರ್ಗವಾಗಿ 4 ಕಿ.ಮೀ. ಸಾಗಿದರೆ ಚೆಂಡೆತ್ತಡ್ಕ ಪ್ರದೇಶ ಎದುರುಗೊಳ್ಳುತ್ತದೆ.

ಲಕ್ಷ ಭಕ್ತರ ನಿರೀಕ್ಷೆ
ಹನ್ನೆರಡು ವರ್ಷದ ಹಿಂದೆ 60 ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿ ಸೇರಿದ್ದಾರೆ. ಇಂತಹ ಗುಹಾ ಉತ್ಸವ ಅಪರೂಪ. ಅನೇಕ ಸಂಪ್ರದಾಯಗಳು ಇಲ್ಲಿವೆ. ಈ ಬಾರಿ ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುವ ನಿರೀಕ್ಷೆ ಇದ್ದು, ಅದಕ್ಕೆ ಪೂರ್ವಬಾವಿ ತಯಾರಿ ಆರಂಭಗೊಂಡಿದೆ. ಅದರ ಪ್ರಯುಕ್ತ ಎ.27 ರಿಂದ 3 ರ ತನಕ ಶ್ರೀ ದೇವಾಲಯದಲ್ಲಿ ಅತಿರುದ್ರ ಮಹಾಯಾಗ ನಡೆಯಲಿದೆ.
-ದಾಮೋದರ ಮಣಿಯಾಣಿ, ಆಡಳಿತ ಮೊಕ್ತೇಸರ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು