ಕಾಸರಗೋಡು: ಎರ್ನಾಕುಲಂನಲ್ಲಿ ಯುವಕನೋರ್ವನನ್ನು ಕೊಲೆಗೈದ ಪ್ರಕರಣದ ಆರೋಪಿಯೋರ್ವ ಬದಿಯಡ್ಕದಲ್ಲಿ ನಡೆದ ಕಳವು ಪ್ರಕರಣದಲ್ಲೂ ಶಾಮೀಲಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಣ್ಣೂರು ಎಡಕ್ಕಾಡ್ ನ ಬಷೀರ್( 42) ಎಂದು ಗುರುತಿಸಲಾಗಿದೆ. ಬದಿಯಡ್ಕ ಬಾರಡ್ಕದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಕಪಾಟಿನಲ್ಲಿದ್ದ 12 ಪವನ್ ಚಿನ್ನಾಭರಣವನ್ನು ಕಳವುಗೈದ ಪ್ರಕರಣ ಆರೋಪಿಯಾಗಿದ್ದಾನೆ. ಈತ 2006 ರಲ್ಲಿ ಎರ್ನಾಕುಲಂ ನ ಯುವಕನೋರ್ವನ ತಲೆಗೆ ಬಡಿದು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ.
ಈ ಪ್ರಕರಣದಲ್ಲಿ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದನು. ಬಾರಡ್ಕದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೂರಿನ ಎಂ .ಪಿ ಹರೀಶ್ ಕುಮಾರ್ ಮತ್ತು ಮುಳ್ಳೇರಿಯಾ ಪೈಕದ ಅಶೋಕ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅಶೋಕ್ ಈ ಹಿಂದೆ ಅಬಕಾರಿ ಪ್ರಕರಣದಲ್ಲಿ ಬಂಧಿತನಾಗಿ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಬಷೀರ್ ನ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.