ಮಡಿಕೇರಿ: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಸಂಘಟನೆ ಕೊಡಗು ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಪ್ರಮುಖರು ರಾಜ್ಯ ಹಾಗೂ ಕೇಂದ್ರ ಸರಕಾರಗಳ ದ್ವಂದ್ವ ನಿಲುವುಗಳನ್ನು ಖಂಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು, ಕಳೆದ ಅನೇಕ ವರ್ಷಗಳಿಂದ ಕಟ್ಟಡ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರು ಸರ್ಕಾರ ನಿರ್ಲಕ್ಷ್ಯ ಮನೋಭಾವನೆ ತಾಳಿದೆಯೆಂದು ಆರೋಪಿಸಿದರು. ಸೆಸ್ ರೂಪದಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುತ್ತಿರುವ ಸರ್ಕಾರ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿ ಕೆಲವು ಕೊರತೆಗಳನ್ನು ತುಂಬಲು ಮುಂದಾಗಿರುವುದು ಸ್ವಾಗತಾರ್ಹವಾದದು ವಿವಾಹ ಯೋಜನೆ, ಸಲಕರಣೆ, ಪಿಂಚಣಿ, ಮರಣ ನಿಧಿ ಸೇರಿದಂತೆ ಇನ್ನು ಹಲವು ಅನುಕೂಲತೆಗಳನ್ನು ಕಲ್ಪಿಸದೆ ವಿಳಂಬ ಧೋರಣೆ ತೋರುತ್ತಿರುವುದು ಖಂಡನೀಯವೆಂದರು.
ಬೇಡಿಕೆಗಳು:
ವಿವಾಹ, ಪಿಂಚಣಿ, ವೈದ್ಯಕೀಯ ಸೌಲಭ್ಯಗಳನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು, ಕಲ್ಯಾಣ ಮಂಡಳಿಯು ಎಲ್ಲಾ ಹಂತಗಳಲ್ಲೂ ಫಲಾನುಭವಿಗಳ ನೋಂದಣಿ, ನವೀಕರಣ, ಸೌಲಭ್ಯಗಳ ವಿತರಣೆಗೆ ವ್ಯವಸ್ಥಿತ ಕಛೇರಿಯನ್ನು ತೆರೆಯಬೇಕು, ಕಾರ್ಮಿಕ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅರ್ಹ ಯೋಜನೆಗಳ ಹಣ ಮಂಜೂರಾಗುವಂತೆ ನೋಡಿಕೊಳ್ಳಬೇಕು, ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಹಿಂಬಾಕಿ ಸಹಿತ ಮಾಸಿಕ ಪಿಂಚಣಿ 3 ಸಾವಿರ ರೂ. ಹೆಚ್ಚಿಸಿ ಮಂಜೂರು ಮಾಡಬೇಕು, ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಕಾರ್ಮಿಕರ ಮಕ್ಕಳಿಗಾಗಿ ಜಾರಿಯಲ್ಲಿರುವ ಶೈಕ್ಷಣಿಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸಬೇಕು, ವಸತಿ ಯೋಜನೆಯನ್ನು ಜಾರಿಗೆ ತರಬೇಕು, ರಾಜ್ಯದಲ್ಲಿ ಶೀಘ್ರ ಮರಳು ನೀತಿಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಅಧ್ಯಕ್ಷರಾದ ಸಾಲಿ ಪೌಲೋಸ್, ಖಜಾಂಚಿ ಸಿ.ಎ.ಹಮೀದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಫೋಟೋ :: ಕಾಮರ್ಿಕ ಪ್ರೊಟೆಸ್ಟ್ 1, 2
===========================================