ಉಳ್ಳಾಲ: ಇಲ್ಲಿನ ಕೈಕೋ ಮೀನಿನ ಕಾರ್ಖನೆಗೆ ಕೆಲಸಕ್ಕೆಂದು ಬಂದು ನಾಪತ್ತೆಯಾಗಿದ್ದ ಉತ್ತರಕನ್ನಡ ಹಳಿಯಾಳ ಮೂಲದ ಬಾಬು ಚಿಮನು ಬಾಜಾರಿ ಅವರ ಪುತ್ರಿ ದೊಂಡಿಬಾಯಿ ಚಿಮನು ಬಾಜಾರಿ(20) ಮತ್ತು ಆಕೆಯನ್ನು ಕೆಲಸಕ್ಕೆ ಸೇರಿಸಿದ ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ ಎಂಬವರು ಸೋಮವಾರ ತವರೂರಿನ ಹಳಿಯಾಳ ಪೊಲೀಸ್ ಠಾಣೆಗೆ ಸೋಮವಾರ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು. ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಅಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಅತಂಕ ಉಂಟಾಗಿತ್ತು. ಇದರಿಂದ ಆತಂಕಿತರಾದ ಈಕೆಯ ಸಂಬಂಧಿಕರು ಉಳ್ಳಾಲದಲ್ಲಿ ಈಕೆಯ ಹುಡುಕಾಟದಲ್ಲಿ ತೊಡಗಿದ್ದು, ಶುಕ್ರವಾರ ಬೆಳಿಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಯುವತಿ ಮಾರಾಟ ನಡೆದಿರುವ ಆರೋಪಗಳು ರಾಜ್ಯಾದ್ಯಂತ ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಉಳ್ಳಾಲ ಪೊಲೀಸರು ಇಬ್ಬರ ಟವರ್ ಲೊಕೇಷನ್ ಪರಿಶೀಲಿಸಿದಾಗ ಕೋಟೆಕಾರು ಮಾಡೂರಿನ ಕಡೆ ಮಾಹಿತಿ ನೀಡಿತ್ತು. ಅಲ್ಲಿ ಪೊಲೀಸರು ಸಂಜೆ ವೇಳೆ ತೆರಳಿದ್ದಾಗ ಬಾಡಿಗೆ ಮನೆಯಲ್ಲಿ ಸಾಮಗ್ರಿಗಳೆಲ್ಲವೂ ಇದ್ದು, ಇಬ್ಬರು ಸಂಜೆಯೇ ಹೊರಟಿದ್ದರೆಂದು ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಮೊಬೈಲ್ ನಂಬರ್ ಪರಿಶೀಲಿಸಿದಾಗ ಉಡುಪಿ, ಗೋವಾ ದಲ್ಲಿ ಟವರ್ ಲೊಕೇಷನ್ ತೋರಿಸಿತ್ತು. ಸೋಮವಾರ ಬೆಳಿಗ್ಗೆ ಇಬ್ಬರು ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಇಬ್ಬರೂ ಉಳ್ಳಾಲದ ಕೈಕೋ ಕಾರ್ಖಾನೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಮಾಡೂರಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮನೆಗೆ ಹೋದಲ್ಲಿ ಮದುವೆ ಮಾಡಿಕೊಡುತ್ತಾರೆಂಬ ಭಯದಿಂದ ಅಲ್ಲಿಗೆ ತೆರಳದೆ ಸುನೀತಾ ಜತೆಗೆ ನೆಲೆಸಿರುವುದಾಗಿ ತಿಳಿಸಿದ್ದಳು. ಶುಕ್ರವಾರ ದಿನ ಮಾಧ್ಯಮಗಳಲ್ಲಿ ನಾಪತ್ತೆ ಸುದ್ಧಿ ಮಾತ್ರವಲ್ಲದೆ ಮಾರಾಟದ ಸುದ್ಧಿ ಪ್ರಚಾರ ಪಡೆಯುತ್ತಿದ್ದಂತೆ ಗಾಬರಿಗೊಂಡು ಬಾಡಿಗೆ ಮನೆಯನ್ನು ಬಿಟ್ಟು ರೈಲು ಹತ್ತಿ ಊರಿಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಆದರೆ ಊರಿನ ಮಂದಿ ಎಲ್ಲಿ ಹೊಡೆಯುತ್ತಾರೋ ಅನ್ನುವ ಭೀತಿಯಿಂದ ಹಳಿಯಾಳ ಪೊಲೀಸ್ ಠಾಣೆಗೆ ಹಾಜರಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮುಂಜಾಗ್ರತಾ ಸಭೆ: ಹಳಿಯಾಳದಲ್ಲಿ ಮಾ.25 ರಂದು ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ. ಊರಿನ ಯಾವುದೇ ಯುವತಿಯರನ್ನು ಹೊರಗಡೆ ಕೆಲಸಕ್ಕೆ ಕರೆದೊಯ್ದಲ್ಲಿ ತಾಲೂಕಿನಲ್ಲಿ ನೋಂದಾಯಿಸಿಯೇ ಕರೆದುಕೊಂಡು ಹೋಗಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಸಮಾಜಸೇವಕ ಸ್ಯಾಮುವೆಲ್ ತಿಳಿಸಿದ್ದಾರೆ.