ಕಾಸರಗೋಡು : ಮದ್ರಸ ಅಧ್ಯಾಪಕರೋರ್ವರನ್ನು ಕತ್ತು ಕೊಯ್ದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ಬಟ್ಟಂಪಾರೆ ಹಳೆಚೂರಿ ಎಂಬಲ್ಲಿ ಮುಂಜಾನೆ ಬೆಳಕಿಗೆ ಬಂದಿದೆ.
ಇಜ್ಜತ್ತುಲ್ ಇಸ್ಲಾಮ್ ಮದ್ರಸದ ಅಧ್ಯಾಪಕ , ಮಡಿಕೇರಿಯ ರಿಯಾಜ್ ( 34) ಕೊಲೆಗೀಡಾದವರು. ಮಸೀದಿ ಪಕ್ಕದಲ್ಲಿರುವ ವಾಸ ಸ್ಥಳದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಿಯಾಜ್ ಮತ್ತು ಸಮೀಪದ ಕೋಣೆ ಯೊಂದರಲ್ಲಿ ಖತೀಬ್ ಅಬ್ದುಲ್ ಅಜೀಜ್ ಮಲಗುತ್ತಿದ್ದರು. ರಾತ್ರಿ 12:15 ರ ಸುಮಾರಿಗೆ ಬೊಬ್ಬೆ ಕೇಳಿ ಖತೀಬ್ ಬಾಗಿಲು ತೆರೆದಾಗ ಕಲ್ಲು ತೂರಾಟ ನಡೆದಿದೆ.
ಕೂಡಲೇ ಬಾಗಿಲು ಜಡಿದರು. ಈ ಕೋಣೆಯಿಂದಲೇ ಮಸೀದಿಗೆ ಒಳ ದಾರಿಯಿದ್ದು ಈ ಮೂಲಕ ಮಸೀದಿಗೆ ತೆರಳಿ ಮೈಕ್ ಮೂಲಕ ಪರಿಸರವಾಸಿಗಳಿಗೆ ಮಾಹಿತಿ ನೀಡಿದರು.
ಸ್ಥಳೀಯರು ಧಾವಿಸಿ ಬಂದು ಪರಿಶೀಲನೆ ನಡೆಸಿದಾಗ ರಿಯಾಜ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕುತ್ತಿಗೆಗೆ ಕಡಿದು ಕೊಲೆ ಮಾಡಲಾಗಿದ್ದ್ದು, ಬೈಕ್ ನಲ್ಲಿ ಬಂದ ಇಬ್ಬರು ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ
ಸುದ್ದಿ ತಿಳಿದು ಕಾಸರಗೋಡು ನಗರ ಠಾಣಾ ಪೊಲೀಸರು , ಡಿ ವೈ ಎಸ್ ಪಿ ವಿ . ಸುಕುಮಾರನ್ , ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹಮಾನ್, ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ತನಿಖೆ ನಡೆಸುತ್ತಿದೆ. ಉತ್ತರ ವಲಯ ಎಡಿಜಿಪಿ ರಾಜೇಶ್ ದಿವಾನ್, ಐ ಜಿ ಮಹಿಪಾಲ್ ಯಾದವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕೊಲೆಯನ್ನು ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಮುಸ್ಲಿಂ ಲೀಗ್ ಹರತಾಳಕ್ಕೆ ಕರೆ ನೀಡಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಒಂಭತ್ತು ವರ್ಷಗಳಿಂದ ಹಳೆ ಚೂರಿ ಮುಹಾಯುದ್ದೀನ್ ಜುಮಾ ಮಸೀದ್ ಸಮೀಪದ ಇಜ್ಜತ್ತುಲ್ ಇಸ್ಲಾಮ್ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು
ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು , ಪರಿಸರದ ಸಿಸಿಟಿ ವಿ ದೃಶ್ಯಗಳನ್ನು ಕೇಂದ್ರೀಕರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳು ಜಿಲ್ಲೆಯಿಂದ ಹೊರರಾಜ್ಯಕ್ಕೆ ಪರಾರಿಯಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು , ಎಲ್ಲಾ ಪೊಲೀಸ್ ಠಾಣೆ ಗಳಿಗೂ ಮಾಹಿತಿ ನೀಡಲಾಗಿದೆ.