ಬೆಳ್ತಂಗಡಿ: ಉಜಿರೆಯಲ್ಲಿ ನೃತ್ಯ, ಸಂಗೀತ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಿಗಾಗಿ ಉಜಿರೆಯ ಈಜು ಕೊಳದ ಬಳಿ ಬಯಲು ರಂಗಮಂದಿರ ನಿರ್ಮಿಸಲು ನೀಲನಕ್ಷೆ ಸಿದ್ದಗೊಂಡಿದ್ದು ಕಲಾಭಿಮಾನಿಗಳ ಬಹುಕಾಲದ ಕನಸು ನನಸಾಗುವ ದಿನ ಸನ್ನಿಹಿತವಾಗಿದ್ದು, ಶೀಘ್ರ ಶಿಲಾನ್ಯಾಸ ನಡೆಯಲಿದೆಯೆಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಗುರುವಾರ ಸಂಜೆ ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ ಸಮೂಹ ಉಜಿರೆಯ ರಜತ ವರ್ಷ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾಟಕ ಕಲೆ ಇನ್ನೂ ಜೀವಂತವಾಗಿದ್ದು, ಆಧುನಿಕ ತಂತ್ರಜ್ಞಾನ, ಸೌಲಭ್ಯಗಳೊಂದಿಗೆ ನಾವೀನ್ಯತೆಯ ಪ್ರಯೋಗಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವನ ಶೈಲಿ, ನೋಡುವ ದೃಷ್ಟಿಕೋನ ಬದಲಾಗಿದ್ದರೂ ಆಧುನಿಕ ತಂತ್ರಜ್ಞಾನದ ಪರಿವರ್ತನೆಯ ಪ್ರಯೋಗಗಳಿಂದ ರಂಗಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಸಮೂಹದ ಅಧ್ಯಕ್ಷೆ ಹೇಮಾವತಿ ಹೆಗ್ಗಡೆ ಅವರು, ಬೆಳ್ತಂಗಡಿ ತಾಲೂಕಿನ ಜನತೆಗೆ ಒಳ್ಳೆಯ ಸಾಂಸ್ಕೃತಿಕ ಸಂಘಟನೆ ಬೇಕೆಂಬ ಸದುದ್ದೇಶದಿಂದ ಸಮೂಹವನ್ನು ಆರಂಭಿಸಿದ್ದೇವೆ. ಸಮಾನ ಮನಸ್ಕ ಸದಸ್ಯರಲ್ಲಿ ಹೆಚ್ಚು ಚಟುವಟಿಕೆಯ ಉತ್ಸಾಹ ಹಾಗೂ ಬದ್ದತೆ ಬೇಕು. ಕಲೆ, ಸಾಹಿತ್ಯಗಳಲ್ಲಿ ಮಕ್ಕಳು ದೂರ ಸರಿಯುತ್ತಿದ್ದು ಅವರಲ್ಲಿ ಆ ಬಗ್ಗೆ ಆಸಕ್ತಿ ತೋರಿಸಬೇಕಾಗಿದೆ. ಮನುಷ್ಯನಿಗೆ ಸಂತೋಷ, ಉಲ್ಲಾಸ, ಆರೋಗ್ಯದ ಸ್ವಾಸ್ಥ್ಯ ಸಂರಕ್ಷಣೆಗೆ ನಾಟಕಗಳಲ್ಲಿ ಮೌಲ್ಯ ತುಂಬುವ ಕೆಲಸ ನಡೆಯಬೇಕು ಎಂದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಸಮೂಹದ ಸದಸ್ಯ ಯು. ಹೆಚ್. ಖಾಲಿದ್ ಬಬ್ರುವಾಹನ ಏಕಪಾತ್ರಾಭಿನಯ ಹಾಗೂ ಸಮೂಹದ ಸದಸ್ಯರಿಂದ ಪ್ರಸನ್ನ ನಿರ್ದೇಶನದಲ್ಲಿ ಏನ್ ಹುಚ್ಚೂರೀ ಹಾಸ್ಯಮಯ ನಾಟಕ ಪ್ರದರ್ಶಿಸಲ್ಪಟ್ಟಿತು. ನಿರ್ದೇಶಕ ಪ್ರಸನ್ನ ಹೆಗ್ಗೋಡು ಅವರನ್ನು ಸಂಸ್ಥೆ ವತಿಯಿಂದ ಡಾ. ಹೆಗ್ಗಡೆಯವರು ಸಮ್ಮಾನಿಸಿ ಗೌರವಿಸಿದರು. ಸಮೂಹದ ಕಾರ್ಯದರ್ಶಿ ಪ್ರೊ. ಟಿ. ಕೃಷ್ಣಮೂರ್ತಿ ಪ್ರಸ್ತಾವಿಸಿ, ಸ್ವಾಗತಿಸಿದರು. ಡಾ. ಶ್ರೀಧರ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಿ.ಎ. ಕುಮಾರ ಹೆಗ್ಡೆ ವಂದಿಸಿದರು.