ಉಳ್ಳಾಲ: ತೊಕ್ಕೊಟ್ಟು ಭಾಗದಲ್ಲಿ ಟೆಂಪೋ ರಿಕ್ಷಾ ಚಾಲಕರಾಗಿರುವ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ನಾಗೇಶ್ ಶೆಟ್ಟಿ ಎಂಬವರ ಪುತ್ರಿ ದೃಶ್ಯ.ಎನ್.ಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ವಿಭಾಗ (ಬಿಎಎಂಎಸ್ ) ದಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆಯುವ ಮೂಲಕ ವೈದ್ಯೆ ಪದವಿಯನ್ನು ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎಎಲ್ಎನ್ ಆರ್ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 2015-16 ನೇ ಸಾಲಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಂತಿಮ ಬಿಎಎಂಎಸ್ ಪರೀಕ್ಷೆಯಲ್ಲಿ 7 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ದೃಶ್ಯ ಇವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ನಿವಾಸಿ ರಿಕ್ಷಾ ಚಾಲಕ ನಾಗೇಶ್ ಶೆಟ್ಟಿ ಹಾಗೂ ತಾಯಿ ಶಮಂತ ಶೆಟ್ಟಿ ಇವರ ದ್ವಿತೀಯ ಪುತ್ರಿಯಾಗಿದ್ದಾರೆ. ಸಕಲೇಶಪುರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು , ಸಂತ ಜೋಸೆಫರ ಹಿರಿಯ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ಪಡೆದುಕೊಂಡಿದ್ದರು. ಬಳಿಕ ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಕೊಪ್ಪದ ಎಎಲ್ಎನ್ ಆರ್ ರಾವ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇರ್ಪಡೆಗೊಂಡಿದ್ದರು.
ಹೆತ್ತವರ ಪ್ರೋತ್ಸಾಹದಿಂದ ರ್ಯಾಂಕ್ ಪಡೆಯಲು ಸಾಧ್ಯವಾಯಿತು. ದಿನವಿಡೀ ಓದಲಿಲ್ಲ, ಅಗತ್ಯ ಸಮಯವನ್ನು ಹಾಳು ಮಾಡದೆ ಶ್ರಮವಹಿಸಿ ಓದಿದ್ದೇನೆ. ಆದರೆ ನಿರೀಕ್ಷಿಸಿದ ಪ್ರತಿಫಲ ಸಿಗದಿದ್ದರೂ, ಫಲಿತಾಂಶ ಸಂತಸ ಕೊಟ್ಟಿದೆ. ಮುಂದೆಯೂ ವೈದ್ಯಕೀಯ ಸೇವೆಯಲ್ಲೇ ಉನ್ನತ ಶಿಕ್ಷಣವನ್ನು ಪಡೆಯುವ ಉದ್ದೇಶ ಹೊಂದಿದ್ದು, ಅ ಬಳಿಕವೇ ಸಾಮಾಜಿಕ ಮೌಲ್ಯಗಳನ್ನು ಮುಂದಿಟ್ಟು ಮಾನವೀಯತೆಯೊಂದಿಗೆ ಜನರಿಗೆ ಸೇವೆ ನೀಡಲು ಇಚ್ಛಿಸಿದ್ದೇನೆ ಅನ್ನುವ ಡಾ.ದೃಶ್ಯ.ಎನ್.ಶೆಟ್ಟಿ , ಹವ್ಯಾಸಗಳಲ್ಲಿ ನೋವೆಲ್ ಓದುವುದನ್ನು ಇಂದಿಗೂ ಮುಂದುವರಿಸಿದ್ದಾರೆ. ತಾಯಿ ಶಮಂತಾ ಶೆಟ್ಟಿ ಇವರು ಹಿಂದೆ ಪಂಚಾಯಿತಿಯೊಂದರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆಸಲ್ಲಿಸಿ, ಇದೀಗ ಭಡ್ತಿ ಪಡೆದುಕೊಂಡು ಜಿಲ್ಲಾ ಪಂಚಾಯಿತಿಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿಯ ಸಾಧನೆ ಅವರಿಗೂ ಸಂತಸ ತಂದಿದ್ದು, ತಂದೆಯ ನಿರಂತರ ಶ್ರಮದಿಂದಾಗಿ ಪುತ್ರಿ ಈ ಮಟ್ಟಿನ ಸಾಧನೆಗೈಯ್ಯಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ.
ತಂದೆ ನಾಗೇಶ್ ಶೆಟ್ಟಿ ಅವರು ಕಾಂಗ್ರೆಸ್ ಸೇವಾ ದಳದ ಸಕ್ರೀಯ ಕಾರ್ಯಕರ್ತರಾಗಿದ್ದುಕೊಂಡು, ತೊಕ್ಕೊಟ್ಟು ಭಾಗದಲ್ಲಿ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.