ಬಂಟ್ವಾಳ: ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ. ಇಬ್ರಾಹಿಂ ಸಾಹೇಬರ ಮನೆಯಂಗಳದಲ್ಲಿ ಸೋಮವಾರ ಸಂಭವಿಸಿದ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾಲಕ ಅಬ್ದುಲ್ಶುಕೂರ್ ಮೇಲೆ ಸ್ಫೋಟಕ ಕಾಯ್ದೆ ಐಪಿ ಸೆಕ್ಷನ್ 286, 304 ಅಂದರೆ ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ಶುಕೂರ್ ಘಟನಾ ಸಂದರ್ಭದಲ್ಲಿ ವಿದೇಶದಲ್ಲಿದ್ದರು. ಅವರಿಗೆ ಸಿಡಿಮದ್ದು ತಯಾರಿಕಾ ಘಟಕದ ಅನುಮತಿಯಿದ್ದು, ಅವರು ಊರಲ್ಲಿಲ್ಲದ ಸಂದರ್ಭದಲ್ಲಿ ಇದ್ದರೂ, ಘಟನೆಗೆ ಅವರ ನಿರ್ಲಕ್ಷ್ಯತನವೇ ಕಾರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ.
ಸ್ಫೋಟ ನಡೆದ ಪ್ರದೇಶದ ಸುತ್ತಮುತ್ತ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಒಂದು ಕೈ, ಮೂರು ಬೆರಳು, ಒಂದು ಪಾದ ಮತ್ತು ಕಾಲಿನ ಗಂಟು ಭಾಗಗಳು ಪತ್ತೆಯಾಗಿದ್ದು, ಅವುಗಳೆಲ್ಲಾ ಮೃತ ಸುಂದರ ಪೂಜಾರಿ ಕಾರ್ಯಾಡಿ ಅವರದ್ದು ಎಂದು ತಿಳಿದುಬಂದಿದೆ. ಸುಂದರ ಪೂಜಾರಿ(38) ಮತ್ತು ಅಬ್ದುಲ್ಅಜೀಂ(24) ಅವರ ಶವಪರೀಕ್ಷೆ ನಡೆಸಿ, ಸಂಜೆ ಅವರ ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ.
ಈ ಸಿಡಿಮದ್ದು ತಯಾರಿಕೆ ಘಟಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯೇನೋ ಇದೆ. ನಿಯಮ ಪ್ರಕಾರ ಅದು ನಿರ್ಜನ ಪ್ರದೇಶವಾದ ದೂರದ ತೋಟದಲ್ಲಿರಬೇಕು. ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಬಿದಿರಿನಿಂದ ಆವೃತವಾದ ಮತ್ತು ಅಡಿಕೆ ತೋಟದ ತುತ್ತತುದಿಯ ನಿರ್ಜನ ಪ್ರದೇಶದಲ್ಲಿ ಬಾಗಿಲು ಇಲ್ಲದ ಒಂದು ಈ ಚಿಕ್ಕ ಶೆಡ್ ಇದ್ದು, ಹುತ್ತ ಬೆಳೆದಿದ್ದು, ಗೆದ್ದಲು ತುಂಬಿ ಹೋಗಿದೆ. ಅಂದರೆ ಈ ಶೆಡ್ ನಲ್ಲಿ ಮದ್ದು ತಯಾರಿಕಾ ಕಾರ್ಯನಿರ್ವಹಿಸುತ್ತಿರಲಿಲ್ಲ. ತಯಾರಿಕಾ ಘಟಕ ಮನೆ ಪಕ್ಕದಲ್ಲೇ ಇತ್ತು ಎಂಬುದು ಸ್ಪಷ್ಟವಾಗಿ ಹೇಳ ಬಹುದಾಗಿದೆ.
ಮೃತ ಕಾರ್ಮಿಕನೇ ಮನೆಯ ಆಧಾರ:
ಘಟನೆಯಲ್ಲಿ ಮೃತಪಟ್ಟ ಸುಂದರ ಪೂಜಾರಿಯವರು ಸಿಡಿಮದ್ದು ತಯಾರಿಕೆ ಘಟಕದಲ್ಲಿ ಕಳೆದ 18 ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದೆ. ಆದರೆ ಮಕ್ಕಳಾಗಿಲ್ಲ. ಅವರ ಚಿಕ್ಕಮನೆಯಲ್ಲಿ ಅನಾರೋಗ್ಯ ಪೀಡಿತ ತಾಯಿಗೆ ಕಾಡಿಬೇಡಿ ಸಾಲ ಮಾಡಿ, ಚಿಕಿತ್ಸೆ ಮಾಡಿದ್ದರೂ ಅವರನ್ನು ಬದುಕಿಸಲಾಗಿರಲಿಲ್ಲ. ಆರ್ಥಿಕ ದುಸ್ಥಿತಿಯ ಸುಂದರ ಪೂಜಾರಿಯ ಕುಟುಂಬಕ್ಕೆ ಅವರೇ ಆಧಾರಸ್ತಂಭವಾಗಿದ್ದರು. ಅವರನ್ನು ಕಳೆದುಕೊಂಡ ಕುಟುಂಬಕ್ಕೆ ಇದೀಗ ದಿಕ್ಕೇ ತೋಚದಾಗಿದೆ. ಘಟನಾ ಸ್ಥಳಕ್ಕೆ ಊರ, ಪರವೂರಿಂದ ಮಂಗಳವಾರದ ತನಕವೂ ನೂರಾರು ಮಂದಿ ಸಾಲು ಸಾಲಾಗಿ ಆಗಮಿಸಿ ಹೋಗುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ, ಎಡಿಶನಲ್ ಎಸ್.ಪಿ. ವೇದಮೂರ್ತಿ, ಬಂಟ್ವಾಳ ಸಹಾಯ ಅಧೀಕ್ಷಕ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಮಂಜಯ್ಯ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.