ಮಂಗಳೂರು: ಕಟೀಲು ಮೂರನೇ ಮೇಳದ ಪ್ರಸಿದ್ದ ಹಿರಿಯ ಕಲಾವಿದ,ಮೆನೇಜರ್ ಗೇರುಕಟ್ಟೆ ಗಂಗಯ್ಯ ಶೆಟ್ಟಿ ನಿನ್ನೆ ರಾತ್ರಿ ಎಕ್ಕಾರು ಹತ್ತು ಸಮಸ್ತರ ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿನ ಅರುಣಾಸುರನ ಪಾತ್ರದಲ್ಲಿಯೇ ಕುಸಿದು ಬಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದಾದರೂ ಚೇತರಿಸದೆ ವಿಧಿವಶರಾದರು.
ನಿನ್ನೆ ಕಟೀಲು ಸಮೀಪದ ಎಕ್ಕಾರಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನವಿತ್ತು . ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರದಲ್ಲಿದ್ದರು .ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಕಡಿಯುವ ಸನ್ನಿವೇಶ ಬಂದಾಗ ಶೆಟ್ಟರು ರಂಗಸ್ಥಳದಲ್ಲೇ ಕುಸಿದು ಬಿದ್ದರು . ಕೂಡಲೇ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ , ವೈದ್ಯರ ಸಲಹೆಯಂತೆ, ಡಾ.ಪದ್ಮನಾಭ ಕಾಮತರನ್ನು ಸಂಪರ್ಕಿಸಿ , ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಯಲ್ಲೇ ಮೃತಪಟ್ಟರೆಂದು ಡಾ. ಪದ್ಮನಾಭ ಕಾಮತರು ತಿಳಿಸಿದ್ದಾರೆ.
ಈ ಹಿಂದೆ ಶಿರಿಯಾರ ಮಂಜು ನಾಯ್ಕ , ದಾಮೋದರ ಮಂಡೆಚ್ಚ , ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ,ಕೆರೆಮನೆ ಶಂಭು ಹೆಗ್ಡೆ , ಅಶೋಕ ಕೊಲೆಕಾಡಿ , ಅರುವ ನಾರಾಯಣ ಶೆಟ್ಟಿಯವರೂ ರಂಗಸ್ಥಳದಲ್ಲೇ ಕುಸಿದು ನಿಧನರಾಗಿದ್ದರು . ಸುಮಾರು 47 ವರ್ಷಗಳ ಕಾಲ ಕಟೀಲು ಮೇಳದಲ್ಲೇ ಕಲಾವಿದರಾಗಿದ್ದ ಗಂಗಯ್ಯ ಶೆಟ್ಟರು ಮಹಿಷಾಸುರ ಪಾತ್ರದಲ್ಲಿ ಅಪಾರ ಹೆಸರು ಗಳಿಸಿದ್ದರು . 15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಎಂಜೋಗ್ರಾಮ್ ಚಿಕಿತ್ಸೆಗೊಳಗಾಗಿ ,ವೈದ್ಯರ ಸಲಹೆಯಂತೆ , ನಂತರ ಮಹಿಷಾಸುರ ಪಾತ್ರ ಮಾಡುತ್ತಿರಲಿಲ್ಲ ಅರುಣಾಸುರ , ರಕ್ತಬೀಜ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು .ಅಪರೂಪಕ್ಕೊಮ್ಮೆ ಮಹಿಷಾಸುರ ಪಾತ್ರ ಮಾಡುತ್ತಿದ್ದರು . ಎಂಟು ವರ್ಷಗಳ ಹಿಂದೆ ಯಕ್ಷಮಿತ್ರರು , ದುಬೈ ಇವರ ವತಿಯಿಂದ ದುಬೈಯಲ್ಲಿ ಜರಗಿದ್ದ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರ ಮಾಡಿದ್ದರು.
1954 ರಲ್ಲಿ ಅಮ್ಮು ಶೆಟ್ಟಿ – ಕಮಲಾ ಶೆಡ್ತಿ ದಂಪತಿಗಳ ಸುಪುತ್ರರಾಗಿ ಗೇರುಕಟ್ಟೆಯಲ್ಲಿ ಜನಿಸಿದ ಗಂಗಯ್ಯ ಶೆಟ್ಟರು ,ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದುರವರಲ್ಲಿ ಯಕ್ಷಗಾನ ದ ನಾಟ್ಯ ಕಲಿತರು . 1970 ರಲ್ಲಿ ತಮ್ಮ 16 ನೇ ವಯಸ್ಸಲ್ಲಿ ಯಕ್ಷರಂಗ ಪ್ರವೇಶಿಸಿದರು .ಕಟೀಲು ಮೇಳದಲ್ಲೇ ವೃತ್ತಿ ಜೀವನ ಪ್ರಾರಂಭಿಸಿದ ಶೆಟ್ಟರು ಕಟೀಲು ಮೇಳದಲ್ಲಿದ್ದ ಸುಪ್ರಸಿದ್ಧ ಬಣ್ಣದ ವೇಷಧಾರಿ ಕುಟ್ಯಪ್ಪುರವರ ಒಡನಾಟದಲ್ಲಿ ಬಣ್ಣದ ವೇಷದತ್ತ ಹೊರಳಿದರು . ಮಹಿಷಾಸುರ ಪಾತ್ರದಲ್ಲಿ ಅದ್ಭುತ ಸಿದ್ಧಿ ಗಳಿಸಿದ ಕುಟ್ಯಪ್ಪುರವರಿಂದ ಮಹಿಷಾಸುರ ಹಾಗೂ ಇತರೆ ಬಣ್ಣದ ವೇಷಗಳ ಸೂಕ್ಷ್ಮತೆ ಹಾಗೂ ರಂಗದ ನಡೆಯನ್ನು ಕಲಿತರು . ಮುಂದೆ ಕುಟ್ಯಪ್ಪುರಂತೆ ಮಹಿಷಾಸುರ ಪಾತ್ರದಲ್ಲಿ ಅಪಾರ ಪ್ರಸಿದ್ಧಿ ಪಡೆದರು. ಕುಂಞಕಣ್ಣ ಮಣಿಯಾಣಿ , ಕುಂಞಣ್ಣ ಶೆಟ್ಟಿ , ಕುಂಞರಾಮ ಮಣಿಯಾಣಿ , ಕದ್ರಿ ವಿಷ್ಣು , ಗುಡ್ಡಪ್ಪ ಗೌಡ ತ್ರಿವಿಕ್ರಮ ಶೆಣೈ , ಪಡ್ರೆ ಚಂದು , ಕುಷ್ಟ ಗಾಣಿಗ , ಮುಂತಾದ ಹಿರಿಯ ಕಲಾವಿದರ ಪ್ರಭಾವಕ್ಕೊಳಗಾಗಿ ರಾವಣ , ಮಹಿರಾವಣ , ಕುಂಭಕರ್ಣ , ಕೌಂಡ್ಲೀಕ , ತಾರಕಾಸುರ , ವಜೃದುಂಭಿ ,ಅರುಣಾಸುರ , ರಕ್ತಬೀಜ , ಕೌಶಿಕ , ವಾಲಿ , ಮುಂತಾದ ಪಾತ್ರಗಳಲ್ಲಿ ವಿಜೃಂಭಿಸಿದರು . ದುಃಶಾಸನ ವಧೆಯ ” ರುದ್ರಭೀಮ ” ಪಾತ್ರಕ್ಕೆ ಹೊಸ ಆಯಾಮ ಕೊಟ್ಟವರೇ ಗಂಗಯ್ಯ ಶೆಟ್ಟರು .ಕುರಿಯ ಗಣಪತಿ ಶಾಸ್ತ್ರಿಗಳ ಸಂಸರ್ಗದಿಂದ ಹಲವಾರು ಪಾತ್ರಗಳಿಗೆ ಹೊಸರೂಪ ಕೊಟ್ಟರು . ರಾಮಾಯಣ , ಮಹಾಭಾರತ ಮುಂತಾದ ಪುರಾಣಗಳ ಆಳವಾದ ಜ್ಞಾನ ಹೊಂದಿದ್ದ ಶೆಟ್ಟರ ಪಾತ್ರಗಳು ಉತ್ತಮ ಮಾತುಗಾರಿಕೆ ಯಿಂದ ಕೂಡಿತ್ತು . ಶೆಟ್ಟರ ರಾವಣ ,ಅರುಣಾಸುರನಿಗೆ ಪುಂಡರೀಕಾಕ್ಷ ಉಪಾಧ್ಯಾಯರ ಮಂಡೋದರಿ , ಯಶೋಮತಿ ಪಾತ್ರ ಮಾತುಗಾರಿಕೆಯಿಂದಲೇ ವಿಜೃಂಭಿಸಿತ್ತು . ತಾಳಮದ್ದಳೆ ಅರ್ಥಧಾರಿಗಳ ಮಟ್ಟದಲ್ಲೇ ಈ ಪಾತ್ರಗಳ ಪ್ರಸ್ತುತಿ ಶೆಟ್ಟರದಾಗಿತ್ತು . ಬಣ್ಣದ ವೇಷಗಳಂತೆ , ಕೋಲುಕಿರೀಟದ ರಾಜವೇಷವೂ ಶೆಟ್ಟರಿಗೆ ಚೆನ್ನಾಗಿ ಒಲಿದಿತ್ತು .ರಂಗದಲ್ಲಿ ಪಾತ್ರಗಳಿಗೆ ಜೀವ ತುಂಬಿಸುವ ಪ್ರಸ್ತುತಿ ಶೆಟ್ಟರದಾಗಿತ್ತು . ನೂರಾರು ಕಡೆ ಸಂಮಾನ ಪಡೆದಿದ್ದ ಶೆಟ್ಟರ ಅಭಿಮಾನ ಬಳಗವೂ ದೊಡ್ಡದೇ .ನಿನ್ನೆಯ ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ .
ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು . ಧರ್ಮಪತ್ನಿ , ಸುಪುತ್ರರಾದ ಶಶಿಕಾಂತ , ಮುಕೇಶ್ ಹಾಗೂ ಶ್ರೀನಿಧಿ , ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.