ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಬದಿಯಲ್ಲಿ ದೂರವಾಣಿ ಕೇಬಲ್ ಅಳವಡಿಕೆಗೆ ತೆಗೆಯುತ್ತಿದ್ದ ಸಂದರ್ಭದಲ್ಲಿ ನೀರಿನ ಪೈಪೊಂದು ಒಡೆದು ಭಾರೀ ಪ್ರಮಾಣದ ನೀರು ಸೋರಿಕೆಯಾದ ಘಟನೆ ಬುಧವಾರ ಸಂಭವಿಸಿತು.
ಬಂಟ್ವಾಳ ಪುರಸಭೆಯ ಎರಡನೆ ಹಂತದ ಕುಡಿಯುವ ನೀರು ಯೋಜನೆಯ ಪೈಪ್ಲೈನ್ ಹಾಗೂ ದೂರವಾಣಿ ಕೇಬಲ್ ಅಳವಡಿಕೆ ಕಾಮಗಾರಿಗಾಗಿ ಬಿ.ಸಿ.ರೋಡ್ ಸರ್ವೀಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಗೆಯಲಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಕಾಮಗಾರಿಯಿಂದ ಪುರಸಭೆಗೆ ಸೇರಿದ ನೀರಿನ ಪೈಪ್ಗಳು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲ್ ಆಗುತ್ತಿದೆ.
ಒಂದೆಡೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕರಾವಳಿ ಜಿಲ್ಲೆಯ ವಿವಿಧ ತಾಲೂಕುಗಳು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇನ್ನೊಂದೆಡೆ ಬಿಸಿಲ ಬೇಗೆಗೆ ನೇತ್ರಾವತಿ ನದಿ, ಹಳ್ಳ, ಕೊಳ, ಕೆರೆಗಳ ನೀರು ಬತ್ತಿ ಬರಡಾಗಿದೆ. ಎಲ್ಲೆಡೆ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಪೈಪ್ಲೈನ್ ಗಳು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದು ದುರಂತದ ಸಂಗತಿ.
ದುರಸ್ಥಿಯಾಗದ ಪೈಪ್: ಕೇಬಲ್ ಅಳವಡಿಕೆ ಕಾಮಗಾರಿಗಾಗಿ ಬಿ.ಸಿ.ರೋಡ್ ಸವರ್ೀಸ್ ರಸ್ತೆ ಬದಿಯಲ್ಲಿ ಅಗೆಯುತ್ತಿರುವವಾಗ ಸಂದರ್ಭದಲ್ಲಿ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದರೂ ಒಡೆದ ಪೈಪನ್ನು ದುರಸ್ಥಿ ಪಡಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಬುಧವಾರ ಬೆಳಗ್ಗೆ ಪೈಪ್ ಒಡೆದು ಸಂಜೆವರೆಗೆ ನೀರು ಪೋಲಾಗುತ್ತಿದ್ದರೂ ಅದನ್ನು ದುರಸ್ಥಿಗೊಳಿಸದೆ ಕೇಬಲ್ ಅಳವಡಿಕೆ ಗುತ್ತಿಗೆದಾರ ಮತ್ತು ಕೆಲಸದವರು ಕೇಬಲ್ ಅಳವಡಿಕೆ ಕಾಮಗಾರಿಯಲ್ಲೇ ತೊಡಗಿರುವುದು ಕಂಡು ಬಂತು. ಪೈಪ್ ನಿಂದ ಹೊರಹೋದ ನೀರು ಸರ್ವೀಸ್ ರಸ್ತೆಯಲ್ಲಿ ತುಂಬಿದ್ದರಿಂದ ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲು ತೊಂದರೆಯಾದವು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜೆಸಿಬಿ ಯಂತ್ರದಿಂದ ಪೈಪ್ ಒಡೆದ ಸ್ವಲ್ಪ ದೂರದಲ್ಲಿ ದೊಡ್ಡದಾದ ಗುಂಡಿ ಮಾಡಿದ ಕೇಬಲ್ ಅಳವಡಿಕೆ ಕೆಲಸದವರು ಸೋರಿಕೆಯಾದ ನೀರು ಗುಂಡಿಯಲ್ಲಿ ತುಂಬುವಂತೆ ಮಾಡಿದರು. ಬಳಿಕ ಒಡೆದ ಪೈಪ್ ನಿಂದ ಹೊರ ಬಂದ ನೀರು ಆ ಹೊಂಡದಲ್ಲಿ ತುಂಬತೊಡಗಿತು. ಸಂಜೆವರೆಗೆ ಒಡೆದ ಪೈಪ್ಲೈನ್ ದುರಸ್ಥಿಪಡಿಸುವ ಕೆಲಸ ನಡೆದೇ ಇಲ್ಲ.