ಬಂಟ್ವಾಳ: ವಿಟ್ಲದ ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಲ್ಲದೆ ಸಾವಿರಾರು ರೂಪಾಯಿ ದರೋಡೆ ನಡೆಸಿ ಬಿಡುಗಡೆಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಹಾಗೂ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇಪು ಗ್ರಾಮದ ನೀರ್ಕಜೆ ಕುಕ್ಕೆಬೆಟ್ಟು ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್(36) ಬಂಧಿತ ಆರೋಪಿ. ಈತ ಹಾಗೂ ಇತರ ಇಬ್ಬರು ಸೇರಿ ಮಾ. 19ರಂದು ರಾತ್ರಿ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬ್ದುಲ್ ರಝಾಕ್ ಮೋನು ಎಂಬವರನ್ನು ಕಾರಿನಲ್ಲಿ ಅಪಹರಿಸಿದ್ದರು.
ರಝಾಕ್ ತನ್ನ ಸ್ನೇಹಿತ ಮನ್ಸೂರು ಎಂಬಾತನ ಬೈಕ್ ನಲ್ಲಿ ವಿಟ್ಲದಿಂದ ಒಕ್ಕೆತ್ತೂರಿಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರ ತಂಡ ರಝಾಕ್ ನನ್ನು ಅಪಹರಿಸಿತ್ತು. ಕೂಡಲೇ ಮನ್ಸೂರು ನೀಡಿದ ಮಾಹಿತಿಯಂತೆ ವಿಟ್ಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು. ಈ ಮಧ್ಯೆ ಅಪಹರಣಕಾರರು ರಝಾಕ್ ಗೆ ಕೋಳಿ ಅಂಕಕ್ಕೆ ಬಳಸುವ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದರಲ್ಲದೆ ರಝಾಕ್ ಬಳಿಯಿದ್ದ 10 ಸಾವಿರ ರೂ. ನಗದು, ಮೊಬೈಲ್ ಫೋನ್ ದರೋಡೆ ನಡೆಸಿದ್ದರು. ಅಲ್ಲದೆ ಬಿಡುಗಡೆ ಮಾಡಲು 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಪೊಲೀಸರ ಕಾರ್ಯಾಚರಣೆಯ ಮಾಹಿತಿ ಅರಿತ ಅಪಹರಣಕಾರರು ರಝಾಕ್ ನನ್ನು ದೇರಳಕಟ್ಟೆಯಲ್ಲಿ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು.
ಮನ್ಸೂರು ನೀಡಿದ ದೂರು ದಾಖಲಿಸಿದ್ದ ವಿಟ್ಲ ಠಾಣೆ ಪೊಲೀಸರು ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಹನೀಫ್ ಯಾನೆ ಜೋಗಿ ಹನೀಫ್ ಇಂದು ಕೊಡಪದವು ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಂದ ರಝಾಕ್ ನ ಮೊಬೈಲ್ ಫೋನ್, 4 ಸಾವಿರ ರೂ. ನಗದು, ಹಲ್ಲೆ ನಡೆಸಿದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಹನೀಫ್ ಗಾಂಜಾ ದಂಧೆಯಲ್ಲಿ ತೊಡಗಿದವನಾಗಿದ್ದು ಈತನ ಮೇಲೆ ಗಾಂಜಾ ಮಾರಾಟ, ಸೇವನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ಗಳಿವೆ. ಅಲ್ಲದೆ ಹಲ್ಲೆ ಸೇರಿದಂತೆ ಇತರ ಹಲವು ಪ್ರಕರಣಗಳು ಈತನ ಮೇಲಿದ್ದು ವಿಟ್ಲ ಪೊಲೀಸ್ ಠಾಣೆಯ ರೌಡಿ ಶೀಟರ್ ಕೂಡಾ ಆಗಿದ್ದಾನೆ. ಅಪಹರಣ ಪ್ರಕರಣದಲ್ಲಿ ಭಾಗಿಯಾದ ಹನೀಫ್ ನ ಇನ್ನಿಬ್ಬರು ಸಹಚರರು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್.ಜಿ.ಬೊರಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ನೇತೃತ್ವದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ವಿಟ್ಲ ಎಸ್ಸೈ ನಾಗರಾಜ್ ಎಚ್.ಇ., ಸಿಬ್ಬಂದಿಯಾದ ಬಾಲಕೃಷ್ಣ ಗೌಡ, ಪ್ರವೀಣ್ ರೈ, ರಕ್ಷಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್, ವೃತ್ತ ನಿರೀಕ್ಷಕರ ಕಚೇರಿಯ ಗಿರೀಶ್ ಹಾಗೂ ಚಾಲಕರಾದ ರಘು ರಾಮ, ವಿಜಯೇಶ್ವರ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.