ಬಂಟ್ವಾಳ: ಮಂಗಳೂರಿಗೆ ಬರ ಬಂದಿಲ್ಲ, ಇದೆಲ್ಲವೂ ಆಡಳಿತವರ್ಗ ಸೃಷ್ಟಿಸಿದ ಕೃತಕಬರ ಹೀಗೆಂದು ಹೊಸ ಆರೋಪ ಕೇಳಿಬಂದಿದೆ.
ತುಂಬೆ ಹೊಸ ವೆಂಟೆಡ್ ಡ್ಯಾಂ ಮತ್ತು ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಮಂಗಳೂರು ನಗರದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸುವ ಮೂಲಕ ಟ್ಯಾಂಕರ್ ಮಾಫಿಯಾದ ಹಣಗಳಿಸುವ ದಂಧೆಗೆ ಮನಪಾ ಆಡಳಿತ ಮತ್ತು ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬಂದ ಆರೋಪ.
ತುಂಬೆ ಡ್ಯಾಂನಲ್ಲಿ ಧಾರಾಳ ನೀರಿದ್ದರೂ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ಆದೇಶವನ್ನು ಮನಪಾ ನೀಡಿದೆ. ಮನಪಾದ ಈ ಆದೇಶದಿಂದ ಮಂಗಳೂರಿನಲ್ಲಿ ಕೃತಕ ನೀರಿನ ಅಭಾವ ಉಂಟಾಗಿದೆ. ಇದನ್ನೇ ಲಾಭವನ್ನಾಗಿಸಿರುವ ಟ್ಯಾಂಕರ್ ಮಾಲಕರು ತುಂಬೆ ಡ್ಯಾಂನಲ್ಲಿ ನೀರಿಲ್ಲ ಎಂಬ ಗುಮ್ಮವನ್ನು ಹಬ್ಬಿಸಿ ಹೊಟೇಲ್, ಫ್ಲಾಟ್, ಲಾಡ್ಜ್, ನಿರ್ಮಾಣ ಕೆಲಸಕ್ಕೆ ದುಪ್ಪಟ್ಟು ಹಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ.
ಮಾ. 31ರಂದು ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರಿದೆ. ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ 17.90 ಮೀಟರ್ ನೀರು ಇದೆ. ಪ್ರಸ್ತುತ ಎರಡೂ ಡ್ಯಾಂನಲ್ಲಿ ಸುಮಾರು 3ರಿಂದ 4 ತಿಂಗಳಿಗೆ ಸಾಕಾಗಬಹುದಾದಷ್ಟು ನೀರು ಇದೆ. ಹೀಗಿದ್ದರೂ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ನಿರ್ಧಾರವನ್ನು ಮನಪಾ ತೆಗೆದುಕೊಂಡಿರುವುದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯಲ್ಲಿ ಕೇಳಿ ಬರುತ್ತಿದೆ.
ಹೊಸ ಡ್ಯಾಂನಲ್ಲಿ 5 ಮೀಟರ್ ನೀರಿದೆ. ನೀರಿನ ಬಗ್ಗೆ ಮಂಗಳೂರಿನ ಜನರಲ್ಲಿ ಜಾಗೃತಿ ಮಾಡುವುದೇ ಆದರೆ ಹಳೆ ಡ್ಯಾಂನ 4 ಮೀಟರ್ ಗೆ ಖಾಲಿಯಾದ ಮೇಲೆ ಮಾಡಲಿ. ಅದು ಬಿಟ್ಟು ಈಗಲೇ ನೀರು ಸ್ಥಗಿತಗೊಳಿಸುವುದು ಎಷ್ಟು ಸರಿ? ಡ್ಯಾಂನಲ್ಲಿ ಧಾರಾಳ ನೀರಿದ್ದರೂ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ಮೂಲಕ ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಮಾಫಿಯಾಕ್ಕೆ ನೆರವಾಗಲು ಮನಪಾ ಮಂಗಳೂರಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಿದೆ.