ಕಾಸರಗೋಡು: ಬಹುಕಾಲದ ಬೇಡಿಕೆಯಾದ ಕಾಸರಗೋಡು ಪಾಸ್ ಪೋರ್ಟ್ ಸೇವಾ ಕೇಂದ್ರ ಕೊನೆಗೂ ಕಾರ್ಯಾರಂಭಗೊಂಡಿದೆ.
ಕಾಸರಗೋಡು ಪ್ರಧಾನ ಅಂಚೆ ಕಚೇರಿ ಕಟ್ಟಡ ಸಮುಚ್ಚಯದಲ್ಲಿ ಆರಂಭಗೊಂಡಿರುವ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಶನಿವಾರದಂದು ಕಾಸರಗೋಡು ಸಂಸದ ಪಿ. ಕರುಣಾಕರನ್ ಉದ್ಘಾಟಿಸಿದರು.
ಶಾಸಕ ಎನ್. ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ. ಕುಞರಾಮನ್, ಜಿಲ್ಲಾ ಪಂಚಾಯತ್ ಸದಸ್ಯೆ ಎ. ಜಿ.ಸಿ ಬಷೀರ್, ಹೆಚ್ಚುವರಿ ದಂಡಾಧಿಕಾರಿ ಕೆ. ಅಂಬುಜಾಕ್ಷ ನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಜಿ ಸಿಮೋನ್, ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ, ಮಾಜಿ ಸಚಿವ ಸಿ. ಎಚ್ ಕುಞ೦ಬು, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಮ್ ಕುನ್ನಿಲ್, ಎಂ. ಸಿ ಖಮರುದ್ದೀನ್, ಅಂಚೆ ಇಲಾಖಾ ನಿರ್ದೇಶಕ ಎ. ಥೋಮಸ್ ತಿಲಕ್ ರಾಜ್, ಅಂಚೆ ಅಧೀಕ್ಷಕ ಕೇಶವ, ಕೆ.ಪಿ ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಒದಗಿಸಬೇಕೆಂಬ ಬಗ್ಗೆ ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಈ ಹಿಂದೆ ಕಾಸರಗೋಡಿನಲ್ಲಿ ಕೇಂದ್ರ ಕಾರ್ಯಾಚರಿಸುತ್ತಿದ್ದರೂ ಬಳಿಕ ರದ್ದುಗೊಂಡಿತ್ತು.
ಇದರಿಂದ ಕಳೆದ ಒಂದು ದಶಕಗಳಿಂದ ಪಾಸ್ ಪೋರ್ಟ್ ಸೇವೆಗಾಗಿ 100 ಕಿ.ಮೀ ದೂರದ ಪಯ್ಯನ್ನೂರು ಅಥವಾ ಕೋಜಿಕ್ಕೋಡ್ ನ್ನು ಅವಲಂಬಿಸಬೇಕಾದ ಸ್ಥಿತಿ ಉಂಟಾಗಿತ್ತು.
ಕೊನೆಗೂ ಕೇಂದ್ರ ಸರಕಾರ ಎರಡು ತಿಂಗಳ ಹಿಂದೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರುಗೊಳಿಸಿತ್ತು. ಆದರೆ ಸ್ಥಳದ ಹಾಗೂ ಮೂಲಭೂತ ಸೌಲಭ್ಯ ಕೊರತೆಯಿಂದ ಕೇಂದ್ರ ಆರಂಭಿಸಲು ಅಡ್ಡಿಯಾಗಿದ್ದರೂ ಕೊನೆಗೆ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಕಟ್ಟಡ ದಲ್ಲಿ ಕಚೇರಿ ಕಾರ್ಯಾರಂಭಗೊಂಡಿದೆ.
ಈಗ ದಿನಂಪ್ರತಿ 50ರಷ್ಟು ಪಾಸ್ ಪೋರ್ಟ್ ಅರ್ಜಿಗಳ ವಿಲೇವಾರಿ ನಡೆಯಲಿದ್ದು, ಸೆಪ್ಟಂಬರ್ ಬಳಿಕ ದಿನಂಪ್ರತಿ ಬರುವ ಎಲ್ಲಾ ಅರ್ಜಿಗಳ ವಿಲೇವಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್‌ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಅಂದೇ ಟೋಕನ್ ನೀಡಲಾಗುವುದು. ಆ ಟೋಕನ್‌ನಲ್ಲಿ ನಿಗದಿಪಡಿಸಲಾದ ದಿನ ಮತ್ತು ಸಮಯ ದಂದು ಈ ಕೇಂದ್ರಕ್ಕೆ ಹಾಜರಾಗಿ ಅಗತ್ಯದ ಸರ್ಟಿಫಿಕೇಟ್‌ಗಳನ್ನು ಹಾಜರುಪಡಿಸಬೇಕು. ಆನ್‌ಲೈನ್ ಮೂಲಕವೂ ಟೋಕನ್ ಪಡೆದುಕೊಳ್ಳಬಹುದೆಂದೂ ಪಾಸ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.