ಸುಳ್ಯ: ಸುಳ್ಯ ಸಮೀಪದ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿವರ್ಷ ನಡೆದುಕೊಂಡು ಬರುವ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಭಗವತಿಯ ದೊಡ್ಡಮುಡಿ ಶನಿವಾರ ನಡೆಯಿತು. ಶ್ರೀ ಭಗವತಿ ದೊಡ್ಡಮುಡಿಯ ವಿರಾಟ್ ರೂಪವನ್ನು ನೋಡಲು ಸಾವಿರಾರು ಮಂದಿ ಆಸ್ತಿಕರು ಕರಾವಳಿ, ಕೊಡಗು, ಕೇರಳದ ಭಾಗಗಳಿಂದ ಆಗಮಿಸಿದ್ದರು.
ಮಧ್ಯಾಹ್ನ ಮೂರು ಗಂಟೆಯ ಬಳಿಕ ಭಗವತಿ ಹೊರಟಿತು. 30 ಅಡಿ ಎತ್ತರದ ದೊಡ್ಡ ಮುಡಿ ದರ್ಶನಕ್ಕೆ ಭಾರೀ ನೂಕು ನುಗ್ಗಲು ಉಂಟಾಯಿತು. ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ದೊಡ್ಡ ಮುಡಿಯ ದರ್ಶನಕ್ಕಾಗಿ ಭಕ್ತರ ಸಾಲು ನೆರೆದಿತ್ತು. ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ ಗೋಪುರಾಕಾರ ನಿರ್ಮಿಸಿ, ಅದಕ್ಕೆ ಬಣ್ಣದ ಬಟ್ಟೆಗಳಿಂದ ಅಲಂಕರಿಸಿ, ಹೂಗಳಿಂದ ಸಿಂಗರಿಸಿದ ದೊಡ್ಡ ಮುಡಿಯ ದರ್ಶನ ನೆರೆದ ಭಕ್ತರಲ್ಲಿ ಧನ್ಯತಾ ಭಾವ ಮೂಡಿಸಿತು. ಬಳಿಕ ಭಗವತಿಯ ಅನುಗ್ರಹ ಪಡೆದು ಪ್ರಸಾದ ಸ್ವೀಕರಿಸಿ ಭಕ್ತ ಸಮೂಹ ಮರಳಿದರು.
ಮಾ.27ರಿಂದ ಆರಂಭಗೊಂಡು ಏ.10ರ ತನಕ ನಡೆಯುವ ಜಾತ್ರೋತ್ಸವದ ಪ್ರಯುಕ್ತ ವಿವಿಧ ದೈವಗಳ ಕೋಲ, ನೇಮಗಳು ನಡೆಯುತ್ತಿದೆ. ಭಗವತಿಯ ದೊಡ್ಡ ಮುಡಿ ಜಾತ್ರೋತ್ಸವದ ವೈಶಿಷ್ಟ್ಯತೆಯಾಗಿದೆ.