ಕಾರ್ಕಳ: ತಾಲೂಕಿನಾದ್ಯಂತ ನೂರಾರು ಗೇರುಬೀಜ ಸಂಸ್ಕರಣೆಯ ಕಾರ್ಖನೆಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದು ಇದರಲ್ಲಿ ಹೆಚ್ಚಿನವರು ಮಹಿಳಾ ಕಾರ್ಮಿಕರು. ಈ ಗೇರುಬೀಜ ಕಾರ್ಖಾನೆಯ ಕಾರ್ಮಿಕರ ವೇತನ ಪರಿಷ್ಕರಣೆ ಆಗದೆ ಹಲವಾರು ವರ್ಷಗಳೇ ಆಗಿದ್ದು ಗೇರು ಬೀಜ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡುವಂತೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ರವರು ಮನವಿ ಮಾಡಿರುತ್ತಾರೆ.
ಜೀವಾನಾವಶ್ಯಕ ವಸ್ತುಗಳ ಧಾರಣೆ ದಿನೇ ದಿನೇ ಏರುತ್ತಿದ್ದು ಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಕಾರ್ಖಾನೆ ಮಾಲಿಕರು ಗೇರು ಬೀಜ ಸಂಸ್ಕರಣೆಗಳನ್ನು ಯಾಂತ್ರಿಕರಿಸುವುದರಿಂದ ಕಾರ್ಮಿರ ಕೆಲಸದ ವಿಧಾನದಲ್ಲಿಯೂ ಬದಲಾವಣೆಗಳಾಗಿವೆ. ಇದರಿಂದ ದೈನಂದಿನ ವೇತನದಲ್ಲಿ ಕಡಿತವಾಗಿದ್ದು ಪುರುಷ ಕಾರ್ಮಿಕರ ದಿನ ವೇತನದಲ್ಲಿಯೂ ತೀರಾ ಕಡಿಮೆ ಆಗಿದೆ.
ಇತ್ತೀಚೆಗೆ ಕೇಂದ್ರ ಸರಕಾರ ದಿನಕೂಲಿ ನೌಕರರಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನ ಶೇ. 43ರಷ್ಟು ಏರಿಕೆ ಮಾಡಿದೆ. ಆದರೆ ಗೇರು ಬೀಜ ಕಾರ್ಮಿಕರು ಈ ವ್ಯಾಪ್ತಿಗೆ ಬರದೇ ಇರುವುದರಿಂದ ಕಳೆದ 5 ವರ್ಷಗಳಿಂದ ತಮ್ಮ ಮೂಲ ವೇತನದಲ್ಲಿ ಯಾವುದೇ ರೀತಿಯ ಏರಿಕೆ ಕಾಣದೆ ದುಡಿಯುತ್ತಿದ್ದಾರೆ ಎಂದು ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.