ಉಡುಪಿ: ಉಡುಪಿಯಲ್ಲಿ ಮತ್ತೆ ಮರಳು ಮಾಫಿಯಾ ಅಟ್ಟಹಾಸ ಮುಂದುವರೆದಿದ್ದು, ಅಕ್ರಮ ಮರಳು ಲಾರಿಗಳನ್ನು ತಡೆಯಲೆತ್ನಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್ ಹಾಗೂ ಗ್ರಾಮ ಲೆಕ್ಕಿಗನನ್ನು ಕೊಲೆಗೈಯ್ಯಲು ಯತ್ನಿಸಿದ್ದು, ಇದನ್ನು ಖಂಡಿಸಿ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ನೌಕರರು ಒಂದು ದಿನ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸಲಿದ್ದಾರೆ.
ಜಿಲ್ಲಾಧಿಕಾರಿ ಕೊಲೆ ಯತ್ನ ಹಿನ್ನೆಲೆಯಲ್ಲಿ ಉಡುಪಿಯ ಅಟಲ್ ಬಿಹಾರಿ ವಾಜಪೇಯಿ ಸಂಕೀರ್ಣದಲ್ಲಿ ಕಂದಾಯ ಇಲಾಖಾ ನೌಕರರ ಸಮಾಲೋಚನ ಸಭೆ ನಡೆಸಲಾಯಿತು. ಈ ವೇಳೆ ಎಲ್ಲಾ ನೌಕರರು ಪ್ರತಿಭಟನೆ ಮಾಡುವ ನಿರ್ಧಾರ ಮಾಡಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಕುಂದಾಪುರ ಬಳಿಯ ಕಂಡ್ಲೂರು ಬಳಿ ಅಕ್ರಮ ಮರಳು ಸಾಗಣೆ ತಡೆಯಲೆತ್ನಿಸಿದ ತಮ್ಮ ಮತ್ತು ತಮ್ಮ ಸಹಾಯಕ ಅಧಿಕಾರಿ ಶಿಲ್ಪಾ ನಾಗ್ ಅವರ ಮೇಲೆ ಮರಳು ಮಾಫಿಯಾ ದಂಧೆಕೋರರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ತಮ್ಮನ್ನು ಕೊಲೆಗೈಯ್ಯಲು ಯತ್ನಿಸಿದ್ದು, ತಮ್ಮ ಕಾರಿಗೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್ ಅವರು ಹಲ್ನಾಡ್ ಸಮೀಪ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ ಅಡ್ಡೆಗಳ ಮೇಲೆ ದಾಳಿ ಮಾಡಿ 6 ಮಂದಿ ದುಷ್ಕರ್ಮಿಗಳನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಕಂಡ್ಲೂರು ಸಮೀಪ ಕೂಡ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಅಲ್ಲಿಯೂ ಇದೇ ತಂಡ ದಾಳಿ ಮಾಡಿತ್ತು. ಈ ವೇಳೆ ಅಲ್ಲಿದ್ದ ಕೆಲ ದುಷ್ಕರ್ಮಿಗಳು ಉಪ ಜಿಲ್ಲಾಧಿಕಾರಿಗಳ ಇಬ್ಬರು ಚಾಲಕರು ಹಾಗೂ ಗನ್ ಮ್ಯಾನ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದಲ್ಲದೇ ಉಪ ಜಿಲ್ಲಾಧಾಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯ ಗ್ರಾಮ ಲೆಕ್ಕಿಗ ಕಾಂತರಾಜು ಎಂಬ ಅಧಿಕಾರಿ ಮೇಲೂ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.