ಕಾಸರಗೋಡು: ಬಸ್ಸು ಮತ್ತು ಕಾರು ಡಿಕ್ಕಿ ಹೊಡೆದು ಯುವ ಪತ್ರಕರ್ತರೋರ್ವರು ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಚೌಕಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಚೌಕಿಯ ಮುತ್ತಲೀಬ್ (42) ಎಂದು ಗುರುತಿಸಲಾಗಿದೆ. ಕಾಸರಗೋಡಿನ ಸಂಜೆ ದೈನಿಕವಾದ ‘ಕಾರವಲ್ ‘ ನ ಪ್ರಧಾನ ವರದಿಗಾರರಾಗಿದ್ದರು.ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕಾಸರಗೋಡಿನಿಂದ ಚೌಕಿಯಲ್ಲಿರುವ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕರ್ನಾಟಕ ಕೆಎಸ್ ಆರ್ ಟಿಸಿ ಐರಾವತ ಬಸ್ಸು ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ಮುತ್ತಲೀಬ್ ರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸ್ಥಿತಿ ಗಂಭೀರವಾದುದರಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ತಡರಾತ್ರಿ ಮೃತಪಟ್ಟರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು , ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.
ಕಳೆದ 20 ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿದ್ದ ಮುತ್ತಲೀಬ್ ಉತ್ಸಾಹಿ ಪತ್ರಕರ್ತರಾಗಿದ್ದರು. ಇದರ ನಡುವೆ ಕೆಲ ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಊರಿಗೆ ಬಂದ ಬಳಿಕ ಕಳೆದ ಹತ್ತು ವರ್ಷಗಳಿಂದ ಕಾರವಲ್ ಪತ್ರಿಕೆಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.