ಬೆಳ್ತಂಗಡಿ: ನಕ್ಸಲ್ ಎಂಬ ಸಮಾಜ ವಿರೋಧಿ ಚಟುವಟಿಕೆಯಲ್ಲಿ ನಿರತನಾಗಿದ್ದ ರಾಜ್ಯದ ಪ್ರಮುಖ ಎಡ ಪಂಥೀಯ ಆರೋಪಿಯೊಬ್ಬನನ್ನು ರಾಜ್ಯದ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ, ಮಾವೋವಾದಿ ಶಿವಕುಮಾರ್ ಎಂಬಾತನನ್ನು ಮಂಗಳವಾರ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
2013ರಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಕುತ್ಲೂರು ಬಳಿ ನಿವಾಸಿ ರಾಮಚಂದ್ರ ಭಟ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಅವರ ಬೈಕ್ ಹಾಗೂ ಮಾರುತಿ ಓಮ್ನಿ ಕಾರನ್ನು ಬೆಂಕಿಹಾಕಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಮುಖಂಡ ಶಿವಕುಮಾರ್ ಅಲಿಯಾಸ್ ಚೆನ್ನಿ ರಮೇಶ್ (52) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೋಲಿಸರ ಈ ಯಶಸ್ವೀ ಕಾರ್ಯಾಚರಣೆಯಿಂದ ಸಮಾಜ ವಿರೋಧಿ ಶಕ್ತಿಗಳಿಗೆ ಇನ್ನಷ್ಟು ಹಿನ್ನಡೆಯಾಗಿದೆ.
ಬೆಂಗಳೂರಿನ ಕೋರಮಂಗಲ ಸ್ಲಂ ನಿವಾಸಿಯಾಗಿರುವ ಶಿವಕಮಾರ್ ಅಲಿಯಾಸ್ ಚೆನ್ನಿ ರಮೇಶ್ ನನ್ನು ಜೆಪಿ ನಗರ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ವಿಚಾರಣೆ ವೇಳೆ ಕುತ್ಲೂರಿನಲ್ಲಿ ನಡೆದ ಬೈಕ್ ಹಾಗೂ ಓಮ್ನಿಗೆ ಬೆಂಕಿ ಹಾಕಿ ಸುಟ್ಟ ಪ್ರಕರಣವನ್ನು ತಾನು ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಅದರಂತೆ ಬೆಳ್ತಂಗಡಿ ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಸಂದರ್ಭದಲ್ಲಿ ಈತ ನಕ್ಸಲ್ ಪರ ಘೋಷಣೆ ಕೂಗಿದ್ದಾನೆ. ಈತನನ್ನು ಮೂರು ದಿನಗಳ ಪೊಲೀಸ್ ಕಟ್ಟಡಿಗೆ ಒಪ್ಪಿಸಲಾಗಿದೆ. ಶಿವಕುಮಾರ್ ಅಲಿಯಾಸ್ ಚೆನ್ನಿ ರಮೇಶ್ ಈ ಹಿಂದೆ ಕಾರ್ಕಳ ತಾಲೂಕಿನ ಈದು ಎಂಬಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದ ಪಾರ್ವತಿಯ ಗಂಡನಾಗಿದ್ದು, ಕರ್ನಾಟಕದಲ್ಲಿ ನಡೆದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೆ ಈತನ ಮೇಲೆ ಅನೇಕ ಪ್ರಕರಣಗಳಿವೆ.
ಭಾಷಣ ಬಿಗಿದ ಮಾವೋವಾದಿ: ಚೆನ್ನಿ ರಮೇಶನನ್ನು ಪೋಲಿಸರು ನ್ಯಾಯಾಲಯಕ್ಕೆ ಕರೆತರುತ್ತಿದ್ದಂತೆ ಮಾಧ್ಯಮದವರನ್ನು ಕಂಡೊಡನೆ ಉತ್ಸಾಹ ಭರಿತನಾಗಿ ಭಾಷಣ ಮಾಡುತ್ತಿರುವುದು ಕಂಡು ಬಂತು. ನೂರು ವರ್ಷವಾದರೂ ಮಾವೋವಾದಿ ಹೋರಾಟ ನಿಲ್ಲದು. ನಾವು ಶಸ್ತ್ರ ಹಿಡಿದಿರುವುದು ಆತ್ಮರಕ್ಷಣೆಗಾಗಿ ಹೊರತು ಹಿಂಸೆಗಲ್ಲ. ಕರ್ನಾಟಕದಲ್ಲಿ ನಕ್ಸಲರು ಪೋಲಿಸರನ್ನು ಕೊಂದ ಒಂದೇ ಒಂದು ಉದಾಹರಣೆ ಇಲ್ಲ. ನಕ್ಸಲ್ ಚಟುವಟಿಕೆ ನಿಂತು ಹೋಗಿದೆ ಎಂದು ಸರಕಾರ ಹೇಳುತ್ತಿದೆ. ಹಾಗಾದರೆ ಎಎನ್ಎಫ್ ಅನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದಾರೆ. ಎಲ್ಲಾ ಕ್ಯಾಂಪ್ ಗಳನ್ನು ಬಂದ್ ಮಾಡಬಹುದಲ್ಲ ? ಇಬ್ಬರು ಮೂವರು ಇದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟು ಮಂದಿಗೆ ಸರಕಾರ ಯಾಕೆ ಹೆದರುತ್ತಿದೆ. ಕೆಲ ರಾಜಕೀಯ ನಾಯಕರು, ಸ್ಥಳೀಯ ನಾಯಕರು ಅಮಾಯಕ ಮಂದಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ವಿಠಲ ಮಲೆಕುಡಿಯನಿಗೂ ನಕ್ಸಲ್ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ. ಕೆಲವು ಲೇಖನಗಳನ್ನು ಬರೆದಿದ್ದಾನೆಂದು ಪೋಲಿಸರು ಆತನಿಗೆ ನಕ್ಸಲ್ ಪಟ್ಟ ಕಟ್ಟಿದ್ದಾರೆ. ನಕ್ಸಲ ಚಟುವಟಿಕೆ ಇನ್ನೂ ಸಕ್ರೀಯವಾಗಿದೆ ಎಂದು ಭಾರೀ ಭಾಷಣವನ್ನೇ ಮಾಡಿದ್ದಾನೆ. ಈತನಿಗೆ ನ್ಯಾಯಾಲಯದಲ್ಲಿ ಭಾಷಣ ಮಾಡಲು ಪೋಲಿಸರು ಅವಕಾಶ ನೀಡಿದ್ದು ಪ್ರಶ್ನಾರ್ಹವಾಗಿದೆ.
ನ್ಯಾಯಾಲಯಕ್ಕೆ ಪ್ರವೇಶಿಸುವಾಗ ನಕ್ಸಲ್ ಜಿಂದಾಬಾದ್, ಭಗತ್ ಸಿಂಗ್, ರಾಜಗುರು, ಮಾವೋವಾದಿ ಜಿಂದಾಬಾದ್ ಎಂದು ಕೂಗಿದ್ದಾನೆ. ಈತನ ಚಲನವಲನ ಹಾಗೂ ಪೋಲಿಸರ ಚಲನವನಲನಗಳನ್ನು ನಿರೀಕ್ಷಿಸಲು ಮೂವರು ಸಿಪಿಎಂ ಕಾರ್ಯಕರ್ತರು ನ್ಯಾಯಾಲಯದ ಆವರಣದಲ್ಲಿ ಗಂಭೀರವಾಗಿ ಶತಪಥ ಹಾಕುತ್ತಿರುವುದೂ ಕಂಡು ಬಂದಿದೆ. 1987 ರಲ್ಲಿ ಬಿಎ ಪದವಿ ಪಡೆದು ಕೊಂಡ ಈತ 1988 ರಿಂದ ಎಡಪಂಥೀಯ ಸಂಘಟನೆಯಲ್ಲಿ ಸಕ್ರೀಯನಾಗಿದ್ದ . 1995 ರಿಂದ ನಾಡಿನಿಂದ ಕಾಡಿನಲ್ಲಿ ನಕ್ಸಲ್ ಚಟುವಟಿಕೆಗೆ ಸೇರಿ ಪಿಎಲ್ಜೆಎ ಎಂಬ ಸಮಾಜ ವಿರೋಧಿ ಸಂಘಟನೆಯನ್ನು ನಿರ್ವಹಿಸುತ್ತಿದ್ದ . ಇದರ ಪರಿಣಾಮ 2001 ರಿಂದ 05 ರತನಕ ಗುಲ್ಬರ್ಗ ಹಾಗೂ ಹೈದರಾಬಾದಿನಲ್ಲಿ ಜೈಲುವಾಸಿಯಾಗಿದ್ದ . 2000ರಲ್ಲಿ ಪಾರ್ವತಿ ಎಂಬಾಕೆಯನ್ನು ಮದುವೆಯಾಗಿದ್ದ. ಪಾರ್ವತಿ 2003ರ ನ. 17 ರಂದು ಕಾರ್ಕಳ ತಾಲೂಕಿನ ಈದು ಎಂಬಲ್ಲಿ ನಡೆದ ಪೋಲಿಸ್ ಎನ್ ಕೌಂಟರ್ ನಲ್ಲಿ ಹತಳಾಗಿದ್ದಳು. ಈ ಸಂದರ್ಭ ಈತ ಜೈಲಿನಲ್ಲಿದ್ದ.
2013ರ ನ. 8 ರಂದು ರಾತ್ರಿ ಗುಂಪೊಂದು ಏಕಾಏಕಿ ರಾಮಚಂದ್ರ ಭಟ್ಟರ ಮನೆಗೆ ದಾಳಿ ಮಾಡಿ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಅನ್ನು ಸುಟ್ಟು ಹಾಕಿತ್ತು. ಕೆಲವರು ಇದು ಸ್ಥಳೀಯರ ಕೃತ್ಯ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಇದೀಗ ಶಿವಕುಮಾರ ಎಂಬಾತನ ಬಂಧನದಿಂದ ಹಾಗೂ ಆತನ ಹೇಳಿಕೆಯಿಂದ ಆತನೇ ಗುಂಪುಕಟ್ಟಿಕೊಂಡು ಈ ಕೃತ್ಯವೆಸಗಿದ್ದಾನೆಂದ ಸಾಬೀತಾಗಿದೆ.