ಉಳ್ಳಾಲ: ಆಡಿನ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ಯುವಕನೋರ್ವ ರಾಡಿನಿಂದ ವೃದ್ಧ ದಂಪತಿ ಸೇರಿದಂತೆ ಅವರ ಪುತ್ರನಿಗೆ ಹಲ್ಲೆ ನಡೆಸಿರುವ ಘಟನೆ ಕಿನ್ಯಾ ಶಾಲೆ ಸಮೀಪದ ಬೆಳರಿಂಗೆ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು, ಗಾಯಗೊಂಡಿರುವ ಮೂವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿನ್ಯಾ ಬೆಳರಿಂಗೆ ನಿವಾಸಿಗಳಾದ ಜನಾರ್ದನ ಆಳ್ವ (70), ಅವರ ಪತ್ನಿ ಪುಷ್ಪಾವತಿ (52) ಹಾಗೂ ಪುತ್ರ ಅಜಿತ್ (30) ದಾಳಿಗೊಳಗಾದವರು. ನೆರೆಮನೆಯ ಸಫಾಕ್ ((28) ಆತನ ಸಹೋದರನ ನೆರವಿನಿಂದ ದಾಳಿ ನಡೆಸಿರುವುದಾಗಿ ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜೆ ವೇಳೆ ಜನಾರ್ದನ ಹಾಗೂ ಮನೆಯವರು ಟಿ.ವಿ ನೋಡುತ್ತಿದ್ದ ಸಂದರ್ಭ ನೆರೆಮನೆಯ ಸಫಾಕ್ ರಾಡಿನಿಂದ ನಾಯಿಗೆ ಬಡಿಯಲು ಆರಂಭಿಸಿದ್ದನು. ಇದನ್ನು ಕಂಡು ಜನಾರ್ದನ ಅವರು ಪ್ರಶ್ನಿಸುತ್ತಿದ್ದಂತೆ ಅವರ ಮೇಲೆಯೂ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಪುತ್ರ ಅಜಿತ್ ತಡೆಯಲು ಮುಂದಾದಾಗ ಅವರ ಮೇಲೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಪುಷ್ಪಾವತಿ ಅವರ ಮೇಲೂ ಮುಗಿಬಿದ್ದ ಸಫಾಕ್, ತನ್ನ ಸಹೋದರನ ಸಹಾಯದಿಂದ ಮೂವರಿಗೂ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ್ದಾನೆ.
ಸಫಾಕ್ ಮನೆಮಂದಿ ಸಾಕುತ್ತಿದ್ದ ಆಡು ಜನಾರ್ದನ ಅವರ ಮನೆಯ ಹಿತ್ತಿಲಿಗೆ ಬಂದು ಅಡಿಕೆಯ ಗಿಡಗಳನ್ನು ತಿನ್ನುತಿತ್ತು. ಹಲವು ಸಮಯದಿಂದ ಇದೇ ಪರಿಪಾಠ ಮುಂದುವರಿದಾಗ ನೊಂದ ಜನಾರ್ಧನ ಅವರು ಸಫಾಕ್ ಮನೆಗೆ ತೆರಳಿ ಆಡು ಕಟ್ಟಿಹಾಕುವಂತೆ ಆತನ ತಂದೆಯಲ್ಲಿ ಸೂಚಿಸಿದ್ದರು. ಆದರೂ ಕಟ್ಟಿಹಾಕದೇ ಇದ್ದುದರಿಂದ ಬುಧವಾರವೂ ಆಡು ಜನಾರ್ದನ ಅವರ ಮನೆ ಅಂಗಳಕ್ಕೆ ಪ್ರವೇಶಿಸಿತ್ತು. ಇದರಿಂದ ಕೆರಳಿದ ಮನೆಮಂದಿ ಹೊಡೆದು ಓಡಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಸಫಾಕ್ ರಾಡಿನಿಂದ ಹಲ್ಲೆ ನಡೆಸಿರುವುದಾಗಿ ಆಸ್ಪತ್ರೆಯಲ್ಲಿರುವ ಗಾಯಾಳುಗಳು ಆರೋಪಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.