ಉಳ್ಳಾಲ: ಕರ್ತವ್ಯ ಮೆರೆದ ಪೊಲೀಸ್ ಪೇದೆಗೆ ದುಷ್ಕರ್ಮಿಯೋರ್ವ ಕೆನ್ನೆಗೆ ಬಡಿದು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಎಂಬಲ್ಲಿ ನಡೆದಿದೆ.
ಕೊಣಾಜೆ ಪೊಲೀಸ್ ಠಾಣೆಯ ಪೇದೆ ಆದರ್ಶ್(21) ಹಲ್ಲೆಗೊಳಗಾದವರು. ಮಂಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಬೋಳಿಯಾರು ಸಮೀಪ ಕೊಣಾಜೆ ಠಾಣೆಯ ಪೇದೆ ಆದರ್ಶ್ ಗಸ್ತಿನಲ್ಲಿದ್ದರು. ತಡರಾತ್ರಿ ಸಮಯದಲ್ಲಿ ಮುಡಿಪು ಕಡೆಯಿಂದ ಬೋಳಿಯಾರು ಕಡೆಗೆ ಬರುತ್ತಿದ್ದ ಬೈಕ್ ಸವಾರನೋರ್ವ ಮಾರ್ಗ ಮಧ್ಯೆ ರಸ್ತೆ ವಿಭಜಕಕ್ಕೆಂದು ಅಗೆಯಲಾಗಿದ್ದ ಹೊಂಡಕ್ಕೆ ಬೈಕ್ ಸಮೇತ ಉರುಳಿ ಬಿದ್ದಿದ್ದನು. ಇದನ್ನು ಕಂಡ ಸ್ಥಳೀಯ ಯುವಕರು ಪೊಲೀಸ್ ಪೇದೆಯ ಜತೆಗೆ ಕೈಜೋಡಿಸಿ ಹೊಂಡಕ್ಕೆ ಬಿದ್ದವನನ್ನು ಬೈಕ್ ಸಮೇತ ಮೇಲಕ್ಕೆ ಎತ್ತಿದ್ದರು. ಬಳಿಕ ಬೈಕ್ ಸವಾರ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದು, ಹೊಂಡವನ್ನು ಮುಚ್ಚಲು ನಿಮ್ಮಿಂದ ಸಾಧ್ಯವಿಲ್ಲ. ಅದನ್ನು ಬಿಟ್ಟು ಬೇರೆಲ್ಲಾ ದೌರ್ಜನ್ಯ ಎಸಗುತ್ತೀರಿ’ ಎಂದು ಮಾತನ್ನು ಆರಂಭಿಸಿದ್ದ. ಇದೇ ವೇಳೆ ಪೇದೆ ಆದರ್ಶ್ ಮಾತನಾಡಲು ಮುಂದಾದಾಗ ಬೈಕನ್ನು ಸ್ಟಾರ್ಟ್ ಮಾಡಿದ ಕಿರಾತಕ ಬೈಕ್ ಸವಾರ ಪೇದೆ ಆದರ್ಶ್ ಅವರ ಕೆನ್ನೆಗೆ ಹೊಡೆದು, ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.