ಬಂಟ್ವಾಳ: ಸುಮಾರು ಆರು ದಿನಗಳಿಂದ ನೀರು ವಾಸನೆ ಬೀರುತ್ತಿದ್ದರೂ ಪರ್ಯಾಯವಿಲ್ಲದೆ ಗ್ರಾಮಸ್ಥರು ಅದೇ ನೀರನ್ನು ಕುಡಿದಿದ್ದಾರೆ. ವಾಸನೆ ವಿಪರೀತಗೊಂಡು ನೀರು ಕುಡಿಯಲು ಸಾಧ್ಯವಾಗದಾಗ ಟ್ಯಾಂಕ್ ತೆರೆದು ಪರಿಶೀಲನೆ ನಡೆಸಿದ ಗ್ರಾಮಸ್ಥರಿಗೆ ನೀರಿನಲ್ಲಿ ಕಂಡು ಬಂದದ್ದು ಸತ್ತು ಕೊಳೆತಿದ್ದ ದೊಡ್ಡ ಹೆಬ್ಬಾವು!
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದ ಮಜದೋಡಿ ಎಂಬಲ್ಲಿ ಈ ಘಟನೆ ನಡೆದಿದೆ. ಸುಮಾರು ಐದು ಆರು ದಿನಗಳಿಂದ ಕುಡಿಯುವ ನೀರು ವಾಸನೆ ಬೀರುತ್ತಿತ್ತು. ದಿನದಿಂದ ದಿನಕ್ಕೆ ವಾಸನೆ ಹೆಚ್ಚಾಗುತ್ತಿದ್ದಾದರೂ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿದ್ದರಿಂದ ಜನರು ಅದೇ ನೀರನ್ನು ಕುಡಿಯುತ್ತಿದ್ದರು. ಬುಧವಾರ ನೀರು ದುರ್ವಾಸನೆ ಬೀರಿ ಕುಡಿಯಲು ಅಸಾಧ್ಯವಾಗಿತ್ತು. ಅನುಮಾನಗೊಂಡ ಸ್ಥಳೀಯರು ಟ್ಯಾಂಕ್ ಮುಚ್ಚಳವನ್ನು ತೆರೆದು ಪರಿಶೀಲನೆ ನಡೆಸಿದಾಗ ದೊಡ್ಡ ಗಾತ್ರದ ಹೆಬ್ಬಾವೊಂದು ನೀರಿನಲ್ಲಿ ಕೊಳೆತು ನಾರುತ್ತಿತ್ತು ಎನ್ನಲಾಗಿದೆ.
ಈ ನೀರಿನ ಟ್ಯಾಂಕ್ ಮಜದೋಡಿಯ ಎತ್ತರದ ನಿರ್ಜನ ಪ್ರದೇಶದಲ್ಲಿ ಇದೆ. ಅರ್ಧ ಟ್ಯಾಂಕ್ ಭೂಮಿಯ ಅಡಿಯಲ್ಲಿದ್ದರೆ ಅರ್ಧ ಭೂಮಿಯ ಮೇಲೆ ಇದೆ. ಈ ಟ್ಯಾಂಕ್ ಗೆ ಸಮೀಪವೇ ಇರುವ ಬೋರ್ವೆಲ್ ನಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಸುಮಾರು 100 ಕುಟುಂಬಗಳು ಈ ಟ್ಯಾಂಕ್ ನೀರನ್ನೇ ಕುಡಿಯಲು ಬಳಸುತ್ತಿದ್ದರು. ನೀರು ವಾಸನೆ ಬರುತ್ತಿದ್ದ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪಂಚಾಯತ್ ಗೆ ತಿಳಿಸಿದ್ದರು. ಬೇಸಿಗೆಯಾಗಿದ್ದರಿಂದ ಅಂತರ್ಜಲ ಬತ್ತಿದ್ದ ಕಾರಣ ನೀರು ವಾಸನೆ ಬರುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಇನ್ನು ಕೆಲವರು ಬೋರ್ವೆಲ್ ನ ಕಬ್ಬಿಣದ ಪೈಪ್ ನಿಂದಾಗಿ ನೀರು ವಾಸನೆ ಬರುತ್ತಿದೆ ಎಂದು ಅಂದಾಜಿಸಿದ್ದರು ಸ್ಥಳೀಯರು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ವಾಸನೆ ಹೆಚ್ಚಾಗುತ್ತಿದ್ದ ನೀರು ಬುಧವಾರ ವಿಪರೀತ ದುರ್ವಾಸನೆ ಬೀರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಟ್ಯಾಂಕನ್ನು ಪರಿಶೀಲನೆ ನಡೆಸಿದಾಗ ಟ್ಯಾಂಕ್ ನೀರಿನಲ್ಲಿ ಹೆಬ್ಬಾವೊಂದು ಸತ್ತು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಟ್ಯಾಂಕ್ ನೀರು ಖಾಲಿ ಮಾಡಿ ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.