ಕಾಸರಗೋಡು: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ತೆಗೆದುಕೊಂಡ ಆಟೋ ಚಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಗರದ ಕರಂದಕ್ಕಾಡ್ ನಲ್ಲಿ ನಡೆದಿದೆ.
ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೃತಪಟ್ಟವರನ್ನು ಕಾಸರಗೋಡು ನಗರದ ಆಟೋ ಚಾಲಕ ಚೌಕಿ ಸಿಪಿಸಿಆರ್ ಐ ನ ಸಮೀಪದ ಸಂದೀಪ್ ( 25) ಎಂದು ಗುರುತಿಸಲಾಗಿದೆ. ಬೀರಂತಬೈಲ್ ನ ಕೃಷಿ ಉತ್ಪನ್ನ ಕೇಂದ್ರ ಸಮೀಪ ಮದ್ಯಪಾನ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ದಿನಂಪ್ರತಿ ಮದ್ಯಪಾನ ಮಾಡಿ ಕೇಂದ್ರ ಸಿಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು , ಈ ಬಗ್ಗೆ ಲಭಿಸಿದ ದೂರಿನಂತೆ ಕಾಸರಗೋಡು ನಗರಠಾಣಾ ಪೊಲೀಸರು ಶುಕ್ರವಾರ ಸಂಜೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಲ್ಲಿದ್ದ ತಂಡವು ಪರಾರಿಯಾಗಲೆತ್ನಿಸಿದ್ದು ಮೂವರನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾದರು.
ಓಡುವ ಮಧ್ಯೆ ಸಂದೀಪ್ ಕುಸಿದು ಬಿದ್ದಿದ್ದು, ಕೂಡಲೇ ಪೊಲೀಸರು ಜೀಪಿನಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಹೃದಯಾಘಾತ ಸಾವಿಗೆ ಕಾರಣ ಎನ್ನಲಾಗಿದೆ. ಈ ನಡುವೆ ಪೊಲೀಸ್ ದೌರ್ಜನ್ಯದಿಂದ ಸಂದೀಪ್ ಮೃತಪಟ್ಟಿರುವುದಾಗಿ ಆರೋಪಿಸಿ ಸಂಘಪರಿವಾರ ಕಾರ್ಯಕರ್ತರು ಕಾಸರಗೋಡು ನಗರ ಠಾಣೆಗೆ ಮುತ್ತಿಗೆ ಹಾಕಿದರು.
ಇಂದು ಹರತಾಳ: ಸಂದೀಪ್ ಮೃತಪಟ್ಟ ಹಿನ್ನಲೆಯಲ್ಲಿ ಇಂದು ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಹರತಾಳಕ್ಕೆ ಬಿಜೆಪಿ ಕರೆ ನೀಡಿದೆ. ಬೆಳಿಗ್ಗೆ ಆರರಿಂದ ಸಂಜೆ ಆರರತನಕ ಹರತಾಳ ನಡೆಯಲಿದೆ.