ಕಾರ್ಕಳ: ದುಸ್ಥಿತಿಯಲ್ಲಿರುವ ಬೋರ್ವೆಲ್ ನ ದುರಸ್ಥಿಗೆ ಅಸಕ್ತಿ ತೋರದೇ ಅದರ ಸನ್ನಿಹದಲ್ಲಿಯೇ ಹೊಸ ಬೋರ್ವೆಲ್ ವೊಂದನ್ನು ಕೊರೆದ ಕಾರ್ಕಳ ಪುರಸಭೆಯು ಅನಗತ್ಯವಾಗಿ 2 ಲಕ್ಷ ರೂ. ದುಂದು ವೆಚ್ಚ ಮಾಡಿರುವ ಅಂಶ ನಗರದ ಕಲ್ಲೊಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ.
ನಗರದಲ್ಲಿ ಕುಡಿಯುವ ನೀರಿನ ತಾತ್ವಾರ ಎದುರಾಗುತ್ತಿರುವ ಪ್ರದೇಶಗಳಲ್ಲಿ ಕಲ್ಲೊಟ್ಟೆಯು ಒಂದಾಗಿದೆ. ಕಲ್ಲೊಟ್ಟೆಯ ಭಾಗ್ಯನಗರ ಪರಿಸರದಲ್ಲಿ 2008ರ ಪೂರ್ವದಲ್ಲಿಯೇ ಬೋರ್ವೆಲ್ವೊಂದನ್ನು ಕೊರೆಯಲಾಗಿತ್ತು. ನಿರೀಕ್ಷೆಗೂ ಮೀರಿ ನೀರಿನ ಒಳಹರಿವು ಇದ್ದುದರಿಂದ ಅದರ ಮೂಲಕವಾಗಿ ಪರಿಸರದ ನಾಗರಿಕರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಬೋರ್ವೆಲ್ ದುರಸ್ಥಿಗೆ ಒಳಗಾಗಿರುವುದು ಹಾಗೂ ಅದನ್ನು ಸಮರ್ಪಕವಾಗಿ ಬಳಕೆ ಮಾಡದೇ ಹೋದುದರಿಂದ ಪರಿಸರದಲ್ಲಿ ಕುಡಿಯುವ ನೀರಿನ ತಾತ್ವರ ಎದುರುಗೊಂಡಿದೆ. ಬೋರ್ವಲ್ಗಾಗಿ ಜೋಡಣೆ ಮಾಡಲಾಗಿದ್ದ ವಿದ್ಯುತ್ ಪರಿಕರಗಳು ತುಕ್ಕು ಹಿಡಿದು ಕುರುಚಲು ಗಿಡಗಳಿಂದ ಅವೃತ್ತಗೊಂಡಿದೆ.
2 ಲಕ್ಷ ದುಂದು ವೆಚ್ಚ
ಕಲ್ಲೊಟ್ಟೆ ಭಾಗ್ಯನಗರದ ಬೋರ್ವೆಲ್ ದುರಸ್ಥಿಗೆ ಒಳಗಾಗಿರುವುದನ್ನೇ ಮುಂದಿಟ್ಟು ಗುಂಟುನೆಪ ಮುಂದಿಟ್ಟ ಕಾರ್ಕಳ ಪುರಸಭೆಯು ಅದರ 100 ಮೀಟರ್ ದೂರದಲ್ಲಿ ಪೆರ್ವಾಜೆ- ಬಂಡೀಮಠ ಸಂಪರ್ಕ ರಸ್ತೆಯಂಚಿನಲ್ಲಿ ಹೊಸ ಬೋರ್ವೆಲ್ವೊಂದನ್ನು ಕೊರೆದಿದೆ. ಬೋರ್ವೆಲ್, ವಿದ್ಯುತ್ ಹಾಗೂ ಪೈಪ್ ಜೋಡಣೆಯ ಖರ್ಚಿಗಾಗಿ ಸುಮಾರು 2 ಲಕ್ಷ ಭರಿಸಿದೆ.
ಹೊಸ ಬೋರ್ವೆಲ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಲಭಿಸಿದೆ. ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದು ಹೋಗಿದೆ. ಕಡುಬೇಸಿಗೆ ಆವರಿಸಿದರೂ ಅದರ ಸದ್ಬಾಳಕೆ ಮಾಡುವಲ್ಲಿ ಕಾರ್ಕಳ ಪುರಸಭೆ ಮೀನಾಮೇಷ ಎಣಿಸುತ್ತಿದೆ.
ಎಕ್ಸ್ಪ್ರೆಸ್ ಲೈನ್ ದುರುಪಯೋಗ
ರಾಮ ಸಮುದ್ರದಿಂದ ಬಂಡೀಮಠದಲ್ಲಿರುವ ಓವರ್ಹೆಡ್ ಟ್ಯಾಂಕ್ ಗೆ ಪ್ರಮುಖ ಪೈಪ್ ಲೈನ್ ಜೋಡಣೆ ಮಾಡಿ ಕಾರ್ಕಳ ನಗರ ಪ್ರದೇಶ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರು ಸರಬರಾಜು ಮಾಡುವುದು ಎಕ್ಸ್ಪ್ರೆಸ್ ಲೈನ್ ನ ಮೂಲ ಉದ್ದೇಶವಾಗಿತ್ತು. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಹಸ್ತಕ್ಷೇಪಕ್ಕೆ ಎಕ್ಸ್ಪ್ರೆಸ್ ನ ಮೂಲ ಉದ್ದೇಶದ ಅರ್ಥ ಕಳೆದು ಹೋಗಿರುವುದರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಪೊರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಮಸಮುದ್ರದಿಂದ ಬಂಡೀಮಠ ಓವರ್ ಹೆಡ್ ಟ್ಯಾಂಕ್ ಗೆ ಸಂಪರ್ಕಿಸಲಾಗಿರುವ ಎಕ್ಸ್ಪ್ರೆಸ್ ಲೈನ್ ಗೆ ಅಕ್ರಮವಾಗಿ ಪೈಪ್ ಲೈನ್ ಜೋಡಣೆ ಮಾಡಿರುವುದರಿಂದ ಬಂಡಿಮಠ ಓವರ್ ಹೆಡ್ ಟ್ಯಾಂಕ್ ಗೆ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಆಗುದಿಲ್ಲ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಅಗ್ಗಿಂದಾಗೆ ವಿಚಾರವನ್ನು ಕೆಲ ಕೌನ್ಸಿಲರ್ಗಳು ಪ್ರಸ್ತಾಪ ಮುಂದಿಟ್ಟರೂ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಮರೀಚೆಯಾಗಿ ಉಳಿದಾಗ…
ವರ್ಷದ ಎಲ್ಲ ದಿನಗಳಲ್ಲೂ ಕುಡಿಯುವ ನೀರಿನ ತಾತ್ವಾರ ಎದುರಾಗಿರುವ ಮತ್ತೊಂದು ಪ್ರದೇಶವೇ ಜರಿಗುಡ್ಡೆ. ಕಲ್ಲೊಟ್ಟೆಯಲ್ಲಿ ನೂತನವಾಗಿ ಕೊರೆಯಲಾಗಿರುವ ಬೋರ್ವೆಲ್ ನಿಂದ ಜರಿಗುಡ್ಡೆ ಪ್ರದೇಶಕ್ಕೆ ಸಾರ್ವಜನಿಕ ಮಾರ್ಗವಾಗಿ ಸುಮಾರು 6 ಕಿ.ಮೀ ಅಂತರವಿದೆ. ಖಾಸಗಿ ವ್ಯಕ್ತಿಗಳ ಜಾಗವಾಗಿ ಕ್ರಮಿಸಲು ನಾಲ್ಕು ಕಿ.ಮೀ ಕ್ರಮಿಸಿದರೆ ಸಾಕಾಗುತ್ತದೆ. ಇದೇ ದೃಷ್ಠಿಕೋನ ಇಟ್ಟುಕೊಂಡ ಕಾರ್ಕಳ ಪುರಸಭೆಯು ಕಲ್ಲೊಟ್ಟೆಯಿಂದ ಜರಿಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಚಿಂತನೆ ನಡೆಸಿದೆ. ಇದರ ಬಗ್ಗೆ ಸಾಮಾನ್ಯಸಭೆಯಲ್ಲೂ ಪ್ರಸ್ತಾಪ ಇಡಲಾಗಿದೆ. ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಖಾಸಗಿ ವ್ಯಕ್ತಿಗಳ ಸಹಕಾರ ಪೂರ್ಣ ಪ್ರಮಾಣದಲ್ಲಿ ಇರಲೇ ಬೇಕು. ಇಲ್ಲದೇ ಹೋದಲ್ಲಿ 6.ಕಿ.ಮೀ ದೂರದ ಎತ್ತರ ಪ್ರದೇಶದಲ್ಲಿರುವ ಜರಿಗುಡ್ಡೆಗೆ ನೀರು ತಲುಪುವುದು ಮರೀಚಿಕೆಯಾಗಲಿದೆ.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ವಿಘ್ನುವಾಗಲಿರುವ ಬೋರ್ವೆಲ್
ನೂತನವಾಗಿ ಕೊರೆಯಲಾಗಿರುವ ಬೋರ್ವೆಲ್ ಪೆರ್ವಾಜೆ-ಬಂಡೀಮಠದ ಪ್ರಮುಖ ರಸ್ತೆಯಂಚಿನಲ್ಲಿದೆ. ಬೋರ್ವೆಲ್ ನಿರ್ಮಾಣದ ವೇಳೆಗೆ ರೂಪುರೇಷೆ ಸಿದ್ಧಪಡಿಸದೇ ಇರುವುದರಿಂದ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಈ ಬೋರ್ವೆಲ್ ವಿಘ್ನುವಾಗುವ ಸಾಧ್ಯತೆಗಳಿದೆ. ಸಂಪ್ಭರಿತ ನೀರು ಇದ್ದರೂ ಸದ್ಬಾಳಕೆಯಾಗುದಿಲ್ಲ. ಮನೆ ಪರಿಸರದಲ್ಲಿ ಸಂಪ್ಭರಿತ ನೀರಿನ ಮಟ್ಟವಿದೆ. ಹಲವು ವರ್ಷಗಳಿಂದ ಉಪಯೋಗಿಸಲಾಗುತ್ತಿದ್ದ ಬೋರ್ವೆಲ್ ದುರಸ್ಥಿ ಪಡಿಸದೇ ಹೆಚ್ಚುವರಿ ದುಂದು ವೆಚ್ಚ ಮಾಡಿ ಹೊಸ ಬೋರ್ವೆಲ್ ಕೊರೆಯುವ ಅಗತ್ಯ ಇರಲಿಲ್ಲ. -ಸತ್ಯೇಂದ್ರಭಟ್, ಕೃಷಿಕರು, ಭಾಗ್ಯನಗರ,ಕಲ್ಲೊಟ್ಟೆ