ಉಳ್ಳಾಲ: ಬೋರ್ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಇನ್ನೋರ್ವ ಯುವಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ (20) ಮೃತ ಯುವಕ. ಕೊಣಾಜೆ ತಿಬ್ಲೆಪದವಿನ ಶರೀಫ್ (25) ಗಾಯಗೊಂಡವರು. ಖಲೀಲ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದ ಕೋಟೆಕಾರು ಬೀರಿ ಸಮೀಪ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ 6 ಮಂದಿ ಕಾರ್ಮಿಕರು ನಿರತರಾಗಿದ್ದರು. ಸುಮಾರು ನಾಲ್ಕು ಪೈಪುಗಳನ್ನು ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತಯ ಶರೀಫ್, ಐದನೇ ಪೈಪನ್ನು ಮೇಲಕ್ಕೆತ್ತುವ ಸಂದರ್ಭ ಪೈಪ್ ಮೇಲಿದ್ದ ಹೈಟೆನ್ಶನ್ ತಂತಿಗೆ ತಗಲಿದೆ. ಪರಿಣಾಮ ಶರೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಶರೀಫ್ ಎಂಬವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಪಡೆದು ಅವರು ಅಲ್ಲಿಂದ ತೆರಳಿದ್ದಾರೆ.
ಮೃತ ಉಸ್ಮಾನ್ ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ. 9 ನೇ ತರಗತಿ ಮುಗಿಸಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದ ಈತ ಕೂಲಿ ಕೆಲಸ ಇದ್ದಲ್ಲಿ ಮಾತ್ರ ತೆರಳುತ್ತಿದ್ದ. ಇತ್ತೀಚೆಗೆ ಹಲವು ಸಮಯಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾತ ಬುಧವಾರದಂದು ಖಲೀಲ್ ಜತೆಗೆ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ ಕೈಜೋಡಿಸಿಕೊಂಡಿದ್ದ. ಕೆಲಸದಲ್ಲಿ ಪರಿಣತನಲ್ಲದಿದ್ದರೂ, ಗೊತ್ತಿಲ್ಲದವರನ್ನೇ ಗುತ್ತಿಗೆದಾರ ಕೆಲಸದಲ್ಲಿ ಪಳಗಿಸುತ್ತಿದ್ದ ಎಂದು ಉಸ್ಮಾನ್ ಜತೆಗೆ ಕೆಲಸ ನಿರ್ವಹಿಸಿದ್ದ ಕಾರ್ಮಿಕ ತಿಳಿಸಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುತ್ತಿಗೆದಾರ ಖಲೀಲ್ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ಪಡೆಯಲು ಕಷ್ಟವಾಯಿತು.