ಉಳ್ಳಾಲ: ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಗಡಿ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಮ್ಮ ಸೈನಿಕರ ನಡುವಿನ ಹೋರಾಟ ದಿನಂಪ್ರತಿ ನಡೆಯುತ್ತದೆ. ಅದೆಷ್ಟೋ ಸೈನಿಕರು ತಮ್ಮ ತಾಯ್ನಾಡಿಗಾಗಿ ಭಯೋತ್ಪಾದಕರೊಂದಿಗೆ ಕಾದಾಡಿ ಹುತಾತ್ಮರಾದರೆ, ಕೆಲವರು ಗಾಯಗೊಂಡು ಹುಟ್ಟೂರಿಗೆ ಹಿಂತಿರುಗುತ್ತಾರೆ. ಅಂತಹ ಒಬ್ಬ ಯೋಧ ಭಯೋತ್ಪಾದಕರೊಂದಿಗೆ ಹೋರಾಡಿ ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದು, ನಾಲ್ಕನೇಯ ಹೋರಾಟದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಐದೂವರೆ ತಿಂಗಳ ಚಿಕಿತ್ಸೆಯ ಬಳಿಕ ಸಾವಿನಿಂದ ಪಾರಾಗಿ ಇದೀಗ ತನ್ನ ಹುಟ್ಟೂರಿಗೆ ಮರಳಿದ್ದಾರೆ.
ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿಯಾಗಿರುವ ಸಂತೋಷ್ ಕುಲಾಲ್ ಅವರೇ ಭಯೋತ್ಪಾದಕರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋದರಾಗಿದ್ದು, ಅ.12ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೋರ್ ನಲ್ಲಿ ಭಯೋತ್ಪಾದಕರೊಡನೆ ಹೋರಾಡಿ ಗುಂಡಿನೇಟಿನಿಂದ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಸಾವನ್ನು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆಯ ಬಳಿಕ ಎಪ್ರಿಲ್ ನಲ್ಲಿ ತನ್ನ ಹುಟ್ಟೂರಾದ ಮುಡಿಪುವಿಗೆ ಆಗಮಿಸಿದ್ದಾರೆ.
ಬಂಟ್ವಾಳ ತಾಲೂಕಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವ. ಸಣ್ಣ ಪ್ರಾಯದಲ್ಲಿ ತಂದೆ ನಿಧನವಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಮುಡಿಪುವಿನ ಸರಕಾರಿ ಶಾಲೆಯಲ್ಲೇ ಕಲಿತವರು. ಪಿಯುಸಿ ಮುಗಿದ ದೇಶ ಸೇವೆ ಮಾಡುವ ಅದಮ್ಯ ಉತ್ಸಹದಿಂದ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಸೇನೆಗೆ ಆಯ್ಕೆಯಾದರು 2003ರಿಂದ 2016ರವರೆಗೆ 13 ವರ್ಷಗಳ ಕಾಲ ನಿರಂತರವಾಗಿ ಜಮ್ಮು ಕಾಶ್ಮೀರ ಸೇರಿದಂತೆ, ನಾಗಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ಸೇವೆಯನ್ನು ಸಲ್ಲಿಸಿ ನಕ್ಸಲ್, ಸೇರಿದಂತೆ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್ ನಲ್ಲಿದ್ದ ಸಂತೋಷ್ ಅವರು ಕಮಾಂಡೋ ಕೋರ್ಸ್ ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪಾಂಪೋರ್ ದಾಳಿಯಲ್ಲಿ ಗಂಭೀರ: 2016ರ ಸಪ್ಟೆಂಬರ್ ನಲ್ಲಿ ಊರಿಗೆ ಬಂದಿದ್ದ ಸಂತೋಷ್ಗೆ ರಜೆ ಮುಗಿಯುವ ಮೊದಲೇ ಕಾರ್ಯಾಚರಣೆಗೆ ಹಾಜರಾಗುವಂತೆ ಕರೆ ಬಂದಿತ್ತು. ಭಾರತೀಯ ಪಡೆಯ ಸರ್ಜಿಕಲ್ ಸ್ಟೈಕ್ ನ ತಂಡಕ್ಕೆ ಬ್ಯಾಕ್ ಸಪೋಟ್ ಮಾಡುವ ಕಾರ್ಯವನ್ನು ಸಂತೋಷ್ ಅವರಿದ್ದ ತಂಡಕ್ಕೆ ಸಿಕ್ಕಿತ್ತು. ಅದಾದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಪಾಂಪೋರ್ನಲ್ಲಿರುವ ಸರಕಾರಿ ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಸುಳಿವಿನಂತೆ ಇವರಿದ್ದ 6 ಜನರ ಕಮಾಂಡೋ ಕಾರ್ಯಪಡೆಗೆ ಸರ್ಚಿಂಗ್ ಜವಬ್ದಾರಿ ನೀಡಲಾಗಿತ್ತು. ಕಟ್ಟಡ ಮತ್ತು ಕಟ್ಟಡದ ಪಕ್ಕದಲ್ಲಿದ್ದ ಗುಡ್ಡದಲ್ಲಿ ಭಯೋತ್ಪಾದಕರಿದ್ದ ಮಾಹಿತಿ ಸಿಕ್ಕಿತ್ತು ಅಷ್ಟೊತ್ತಿಗೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿತ್ತು. ನಾವು ಗುಡ್ಡದಲ್ಲಿದ್ದ ಮೂವರು ಭಯೋತ್ಪಾದಕರನ್ನು ಮತ್ತು ಕಟ್ಟಡದಲ್ಲಿ ಅಡಗಿದ್ದ ಓರ್ವ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಯಶಸ್ವಿಯಾದೆವು, ಕಟ್ಟಡದಲ್ಲಿದ್ದ ಭಯೋತ್ಪಾದಕರು ನಮ್ಮ ಮೇಲೆ ದಾಳಿ ನಡೆಸಿದಾಗ ನನಗೆ ಎರಡು ಎದೆಗೆ ಮತ್ತು ಮೂರು ಕಾಲಿಗೆ ಗುಂಡು ತಗುಲಿತ್ತು. ನಾವಿದ್ದ ಆರು ಜನರಲ್ಲಿ ಉತ್ತರ ಪ್ರದೇಶದ ಗ್ಯಾನೆಂದರ್ ಮತ್ತು ಒರಿಸ್ಸಾದ ಬಿಸ್ವಾಸ್ ಸಾವನ್ನಪ್ಪಿದ್ದರು. ಎದೆಗೆ ಗುಂಡು ಬಿದ್ದ ಬಳಿಕ ಏನಾಯಿತೆಂದು ಗೊತ್ತಿರಲಿಲ್ಲ. ಎರಡೂವರೆ ವಾರ ಕೋಮಾದಲ್ಲಿದ್ದ ನನಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿಯಿತು. ಈ ಘಟನೆಯಲ್ಲಿ ಸುಮಾರು 56 ಗಂಟೆಗಳ ಕಾರ್ಯಾಚರಣೆ ಬಳಿಕ ಇಡೀ ಆರು ಅಂತಸ್ತಿನ ಕಟ್ಟಡವನ್ನು ಸ್ಪೋಟಿಸಿ ಭಯೋತ್ಪಾದಕರನ್ನು ಕೊಂದ ವಿಚಾರ ತಿಳಿಯಿತು.
ನಾಲ್ಕು ದಾಳಿಯಲ್ಲಿ ಪಾರು: ಕಳೆದ 13 ವರ್ಷಗಳ ಸೇನಾ ಸೇವೆಯಲ್ಲಿ ಹಲವಾರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರೂ ನಾಲ್ಕು ಬಾರಿ ಸಾವಿನ ದವಡೆಯಿಮದ ಪಾರಾಗಿದ್ದೇನೆ ಎನ್ನುತ್ತಾರೆ ಸಂತೋಷ್. ಮಣಿಪುರದಲ್ಲಿ ಮಾವೋವಾದಿಗಳ ದಾಳಿಯಲ್ಲಿ ನಮ್ಮ ತಂಡದ ಮೂರು ವಾಹನಗಳನ್ನು ಸ್ಪೋಟಿಸಿದ್ದು ಅದರಲ್ಲಿ 14 ಸೈನಿಕರು ಹುತಾತ್ಮರಾಗಿದ್ದರು. ನಾಲ್ಕನೇಯ ವಾಹನದಲ್ಲಿದ್ದ ನಾವು ಕೂದಳೆಲೆಯ ಅಂತರದಲ್ಲಿ ಪಾರಾಗಿದ್ದೆವು. ಎರಡನೇ ದಾಳಿ ನಾಗಲ್ಯಾಂಡ್ ನಲ್ಲಿ ರೈಲು ನಿಲ್ದಾಣ ಸ್ಪೋಟದಲ್ಲಿ ಕಾಲಿಗೆ ಗಾಯವಾಗಿತ್ತು. ಮೂರನೇಯ ದಾಳಿ ಪೂಂಛ್ನಲ್ಲಿ ನಡೆದಿದ್ದು ತಲೆಗೆ ಗುಂಡು ತಗಲಿತ್ತು, ನಾಲ್ಕನೇಯ ಪಾಂಪೋರ್ ದಾಳಿಯಲ್ಲಿ ಐದು ಗುಂಡು ತಗುಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ ಎನ್ನುವ ಅವರು ಇನ್ನೂ ಎರಡು ವರ್ಷ ಸೇವಾವ ಬಾಕಿಯಿದ್ದು ಗುಣಮುಖರಾಗಿ ದೇಶ ಸೇವೆಗೆ ಮರಳುವ ಆಶಾವಾದ ವ್ಯಕ್ತಪಡಿಸುತ್ತಾರೆ.
ಮನೆಯ ಏಕೈಕ ಆಧಾರಸ್ತಂಭ: ಸಂತೋಷ್ ಮದುವೆಯಾಗಿ ಮೂರು ವರ್ಷ ಕಳೆದಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ತಾತ್ಕಲಿಕ ನೆಲೆಯಲ್ಲಿ ಶಿಕ್ಷಕಿ, ಬಡ ಕುಟುಂಬವಾಗಿರುವ ಈ ಮನೆಯಲ್ಲಿ ಸಂತೋಷ್ ಅವರೇ ಆಧಾರ ಸ್ತಂಭ. ತಾಯಿ, ಸಹೋದರಿ, ಸಹೋದರಿಯ ಮಗುವನ್ನು ನೋಡುವ ಜವಾಬ್ದಾರಿ ಸಂತೋಷ್ ಅವರದು. ಆದರೆ ಗಂಭೀರವಾಗಿ ಗಾಯಗೊಂಡು ಸೇನೆಯಿಂದ ಮನೆಗೆ ವಾಪಾಸಾಗಿರುವ ಸಂತೋಷ್ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಆಗಬೇಕಾಗಿದೆ.
ಮನೆಗೆ ತಿಳಿಸಿರಲಿಲ್ಲ: ಕಳೆದ ಸಪ್ಟೆಂಬರ್ ನಲ್ಲಿ ಮನೆಗೆ ಬಂದಿದ್ದ ಸಂತೋಷ್ ಕೆಲವೇ ದಿನಗಳಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ತೆರಳಿದ್ದರು. ಅ. 12ರಂದು ನಡೆದ ದಾಳಿಯಲ್ಲಿ ತನಗೆ ಮಾರಣಾಂತಿಕ ಗಾಯವಾಗಿದೆ ಎನ್ನುವ ವಿಚಾರವನ್ನು ಪತ್ನಿ ಮತ್ತು ತಾಯಿ, ಸಹೋದರಿಗೆ ತಿಳಿಸಿರಲಿಲ್ಲ. ಪತ್ನಿಯ ಸಹೋದರನಿಗೆ ಮಾತ್ರ ಮಾಹಿತಿ ನೀಡಿದ್ದರು. ಜಮ್ಮುವಿನ ಪಠಾನ್ಕೋಟ್ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ದೆಹಲಿಯ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೆಹಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿ, ಬೆಂಗಳೂರಿನಿಂದ ಸೇನಾ ವಾಹನದಲ್ಲಿ ಎ.3ರಂದು ಮನೆಗೆ ಬಂದಾಗಲೇ ಪತ್ನಿ, ತಾಯಿ, ಸಹೋದರಿಗೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ವಿಚಾರ ತಿಳಿದದ್ದು. ಕೋಮಾ ಸ್ಥಿತಿಯಿಂದ ಹೊರಬಂದ ಬಳಿಕ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುತ್ತಿದ್ದೆ ಎನ್ನುವ ಸಂತೋಷ್ ತಾನು ಗಾಯಗೊಂಡಿರುವ ಮನೆಯವರಿಗೆ ತಿಳಿದರೆ ಸಮಸ್ಯೆ ಆಗುತ್ತದೆ ಎಂದು ಮಾಹಿತಿ ನೀಡಿರಲಿಲ್ಲ ಎನ್ನುತ್ತಾರೆ.