ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ತೋಡಾರಿನಲ್ಲಿರುವ ಯೆನೆಪೋಯ ತಾಂತ್ರಿಕ ವಿದ್ಯಾಲಯ ಜಂಟಿ ಆಶ್ರಯದಲ್ಲಿ ಏಪ್ರಿಲ್ 24, 25 ರಂದು ಮಂಗಳೂರು ವಲಯ ಮಟ್ಟದ ಏಪ್ರಿಲ್ 27, 28ರಂದು ಅಂತರ್ ವಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ತೋಡಾರಿನ ವೈಐಟಿ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಡಾ.ಆರ್.ಜಿ.ಡಿ’ಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 24ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಸಕ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯೇನಪೋಯ ಗ್ರೂಪ್ ನಿರ್ದೇಶಕ ಯೇನಪೋಯ ಅಬ್ದುಲ್ಲ ಜವೀದ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಂತರ ಮಧ್ಯಾಹ್ನ 3ಗಂಟೆಯಿಂದ ರಾತ್ರಿ 10ಗಂಟೆಯ ತನಕ ಹೊನಲು ಬೆಳಕಿನಲ್ಲಿ ಪಂದ್ಯಾಟ ನಡೆಯಲಿದೆ. ಏಪ್ರಿಲ್ 25ರಂದು ಬೆಳಗ್ಗೆ ಸೆಮಿಫೈನಲ್ ಮಧ್ಯಾಹ್ನ ನಂತರ ಫೈನಲ್ ಪಂದ್ಯ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಯೇನಪೋಯ ಯೂನಿವರ್ಸಿಟಿಯ ಕುಲಪತಿ ಯೇನಪೋಯ ಅಬ್ದುಲ್ ಕುಂಞ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಕಬಡ್ಡಿ ಪಟು ಸುಖೇಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಂಗಳೂರು ವಲಯದ 16ತಾಂತ್ರಿಕ ಮಹಾವಿದ್ಯಾಲಯಗಳ ಪುರುಷರ ತಂಡಗಳು ಭಾಗವಹಿಸಲಿವೆ. 200ಕ್ಕೂ ಅಧಿಕ ಕ್ರೀಡಾಪಟುಗಳು, 50ಕ್ಕೂ ಮಿಕ್ಕಿದ ಅಧಿಕಾರಿ ವರ್ಗ, 15ಮಂದಿ ತೀರ್ಪುಗಾರರು ಭಾಗವಹಿಸುವರು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಉಚಿತ ಊಟೋಪಚಾರ, ವಸತಿ ಸೌಲಭ್ಯವನ್ನು ಸಂಸ್ಥೆ ಮಾಡಲಿದೆ. ಕ್ರೀಡಾ ಸ್ಥಳಕ್ಕೆ ಆಗಮಿಸಲು ಬೇಕಾದ ವಾಹನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿಜೇತ ತಂಡಕ್ಕೆ ಚಾಂಪಿಯನ್ ಶಿಪ್ ಟ್ರೋಫಿ, ವೈಯಕ್ತಿಕ ಬಹುಮಾನ, ಆಕರ್ಷಕ ಪಾರಿತೋಷಕ ನೀಡಲಾಗುವುದು ಎಂದರು.
ಏಕ ಕಾಲದಲ್ಲಿ ಎರಡು ಕಡೆಗಳಲ್ಲಿ ಪಂದ್ಯಾಟ ನಡೆಯುವಂತೆ ಅಂಕಣ ನಿರ್ಮಿಸಲಾಗಿದೆ. ವಲಯ ಮಟ್ಟದಲ್ಲಿ ವಿಜೇತ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಏಪ್ರಿಲ್ 27 ಮತ್ತು 28ರಂದು ಇದೇ ಸ್ಥಳದಲ್ಲಿ ನಡೆಯುವ ಅಂತರ್ ವಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿಸಲಿದ್ದಾರೆ. ಇದೇ ಅಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಅಂತರ್ ವಲಯ ಮಹಿಳಾ ಕಬಡ್ಡಿ ಪಂದ್ಯಾಟವೂ ನಡೆಯಲಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ದೈಹಿಕ ನಿರ್ದೇಶಕ ಲೋಕೇಶ್, ಉಪನ್ಯಾಸಕರಾದ ಸುಜಯ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.