ಬೆಳ್ತಂಗಡಿ: ಕುಡಿಯುವ ನೀರಿನ ವಿಚಾರದಲ್ಲಿ ಕಡಲೆ ಇದ್ದರೆ ಹಲ್ಲಿಲ್ಲ. ಹಲ್ಲಿದ್ದರೆ ಕಡಲೆ ಇಲ್ಲ ಎಂಬ ಗಾದೆಯಂತಾಗಿದೆ ಲಾಯಿಲ ಪಂಚಾಯತ್ ವ್ಯಾಪ್ತಿಯ ಜನತೆಯದ್ದು. ಯಾಕೆಂದರೆ ಸನಿಹದ ಸೋಮಾವತಿ ಹೊಳೆಯಲ್ಲಿ ಬೇಕಾದಷ್ಟು ನೀರಿನ ಸಂಗ್ರಹವಿದ್ದರೂ ಬೆಳ್ತಂಗಡಿ ನಗರದ ಚರಂಡಿ ನೀರಿನ ತ್ಯಾಜ್ಯ ಅಂಶ ಈ ನೀರಿಗೆ ಸೇರುತ್ತಿದೆಯಾದ್ದರಿಂದ ಕುಡಿಯಲು ವಿತರಿಸಲಾಗುತ್ತಿಲ್ಲ. ಹೀಗಾಗಿ ನೀರಿದೆ, ಆದರೆ ಉಪಯೋಗಿಸುವಂತಿಲ್ಲವೆಂಬತಾಗಿದೆ.
ಲಾಯಿಲ ಪಂಚಾಯತ್ ಜನತೆ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪಂಚಾಯತ್ ಬೆಳ್ತಂಗಡಿ ನಗರಕ್ಕೆ ತಾಗಿಕೊಂಡಿದೆ. ಲಾಯಿಲದಲ್ಲಿ 9 ಸಾವಿರ ಜನಸಂಖ್ಯೆ ಇದ್ದು 9 ಕೊಳವೆಬಾವಿಗಳಿವೆ. 975ರಷ್ಟು ಕುಡಿಯುವ ನೀರಿನ ಸಂಪರ್ಕಗಳಿವೆ. ಈ ಸಂಪರ್ಕಗಳಿಗೆ ಒದಗಿಸಲು ಕುಡಿಯುವ ನೀರಿನ ಕೊರತೆ ಇದೆ. ಅದಕ್ಕಾಗಿ ಬೆಳ್ತಂಗಡಿ ಸೋಮಾವತಿ ಹೊಳೆಗೆ ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟಿಗೆ ಪಂಚಾಯತ್ ವತಿಯಿಂದ ಹಲಗೆ ಅಳವಡಿಸಲಾಗಿದೆ. ಆದರೆ ಈ ನೀರನ್ನು ಕುಡಿಯಲು ಕೊಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನ.ಪಂ. ಚರಂಡಿ ನೀರಿನ ತ್ಯಾಜ್ಯ ಅಂಶ ಈ ನೀರಿಗೆ ಮಿಶ್ರವಾಗುತ್ತಿದೆ. ನ.ಪಂ. ಚರಂಡಿ ಇದರ ಪಕ್ಕದಲ್ಲಿಯೇ ಹರಿಯುತ್ತಿರುವುದು ಇದಕ್ಕೆ ಕಾರಣ.
ಕಲುಷಿತ, ತ್ಯಾಜ್ಯ ನೀರು:
ಬೆಳ್ತಂಗಡಿ ಸಂತೆಕಟ್ಟೆ, ನಗರ, ಮುಖ್ಯರಸ್ತೆ, ಬಸ್ ನಿಲ್ದಾಣ ಮೊದಲಾದ ಕಡೆಗಳ ಅಂಗಡಿ, ಹೋಟೆಲ್, ಮನೆಗಳ ತ್ಯಾಜ್ಯ ನೀರು ಅಂಬೇಡ್ಕರ್ ಭವನದ ಹಿಂದಿನ ಚರಂಡಿ ಮೂಲಕ ಹಾದು ಹೋಗಿ ಕೃಷಿ ಇಲಾಖೆ ಜಾಗದ ಮೂಲಕ ಸೋಮಾವತಿ ಹೊಳೆಯನ್ನು ಸೇರುತ್ತಿತ್ತು. ಮೂರು ವರ್ಷಗಳ ಹಿಂದೆ ಪತ್ರಿಕೆ ಈ ಬಗ್ಗೆ ಎಚ್ಚರಿಸಿತ್ತು. ಬಳಿಕ ಎಚ್ಚೆತ್ತ ನ.ಪಂ. ತ್ಯಾಜ್ಯವನ್ನು ನೇರ ಹೊಳೆಗೆ ಬಿಡದೇ ಸನಿಹದಲ್ಲಿ ಚರಂಡಿ ತೆಗೆದಿದೆ. ಈಗ ಕಿಂಡಿ ಅಣೆಕಟ್ಟಿನ ಸಂಗ್ರಹಿತ ನೀರಿಗೆ ತ್ಯಾಜ್ಯ ಸೇರುವುದಿಲ್ಲ. ಬದಲಿಗೆ ಅಣೆಕಟ್ಟಿನ ಆ ಬದಿಯ ನದಿಗೆ ತ್ಯಾಜ್ಯ ಸೇರುತ್ತದೆ. ಆದರೆ ಸಂಗ್ರಹವಾದ ತ್ಯಾಜ್ಯದ ಅಂಶ ನದಿಯಲ್ಲಿ ಸಂಗ್ರಹವಾದ ಶುದ್ಧ ನೀರಿಗೆ ಸೇರುತ್ತಿದೆ. ಜತೆಗೆ ಈ ನೀರಿನಲ್ಲಿಯೇ ಬಟ್ಟೆ ಒಗೆಯುವುದು, ವಾಹನ ತೊಳೆಯವುದು ನಡೆಯುತ್ತಿದೆ.
ಬೆಳ್ತಂಗಡಿಯಿಂದ ಮುಖ್ಯ ರಸ್ತೆಯಲ್ಲಿ ಲಾಯಿಲ ಕಡೆಗೆ ಹೋಗುವಾಗ ಸೋಮಾವತಿ ಹೊಳೆಗೆ ಮುಖ್ಯ ಸೇತುವೆಯ ಬಲ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟಿನಲ್ಲಿ ಈಗಾಗಲೇ ನೀರು ಸಂಗ್ರಹವಾಗತೊಡಗಿದೆ. ಬೆಳ್ತಂಗಡಿ ನಗರ ಪಂಚಾಯತ್ ನವರು ಕುಡಿಯುವ ನೀರಿಗೆ ಎಂದು ಮಣ್ಣಿನ ಕಟ್ಟ ಕಟ್ಟವನ್ನು ಬಲ ಬದಿಗೆ ಕಟ್ಟಿದ್ದಾರೆ. ಇದು ರಾಘವೇಂದ್ರ ಮಠಕ್ಕಿಂತ ಸುಮಾರು ಮುನ್ನೂರು ಮೀ. ದೂರದಲ್ಲಿದೆ. ಲಾಲ ಗ್ರಾಮಸ್ಥರು ಈ ಕಿಂಡಿ ಅಣೆಕಟ್ಟಿನ ಹಲಗೆ ಹಾಕಿ ನೀರು ಸಂಗ್ರಹಿದ್ದಾರೆ.
ನ.ಪಂ. ಸೋಮಾವತಿ ಹೊಳೆಯಲ್ಲಿ ಕುಡಿಯುವ ನೀರಿಗೆ ಒಡ್ಡು ನಿರ್ಮಿಸಲು ವಾರ್ಷಿಕ 1.5 ಲಕ್ಷ ರೂ.ಗಳಷ್ಟು ವ್ಯಯಿಸಲಾಗುತ್ತದೆ. ಮಣ್ಣಿನ ಒಡ್ಡು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಮಾರ್ಚ್, ಎಪ್ರಿಲ್ ನಲ್ಲಿ ಅಕಾಲಿಕ ಜೋರು ಮಳೆ ಬಂದರೆ ಈ ಒಡ್ಡು ಕೊಚ್ಚಿ ಹೋಗುತ್ತದೆ. ಮತ್ತೆ ಒಡ್ಡು ಕಟ್ಟದ ನಿರ್ಮಾಣ ಕಾರ್ಯ ನಡೆಯುತ್ತದೆ. ಹೀಗೆ ಅನೇಕ ವರ್ಷಗಳಿಂದ ತಾತ್ಕಾಲಿಕ ಒಡ್ಡು ನಿರ್ಮಾಣ ಕಾರ್ಯ ನಡೆಯುತ್ತದೆ. ಮಳೆಗಾಲದಲ್ಲಿ ಈ ಒಡ್ಡು ಮಳೆ ನೀರಿಗೆ ಕೊಚ್ಚಿಕೊಂಡು ಹೋಗುತ್ತದೆ. ಮುಂದಿನ ವರ್ಷ ಬೇಸಗೆಗೆ ಮತ್ತೆ ಒಡ್ಡು ರಚನೆ. ಇದರ ಬದಲು ಶಾಶ್ವತ ಕಾಮಗಾರಿ ನಡೆಸಲು ಇದೀಗ 85 ಲಕ್ಷ ರೂ. ಅನುದಾನ ಮಂಜೂರಾಗಿದೆ.
ಸಮನ್ವಯದ ಕೊರತೆ:
ಸರಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದೇ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ ಸೋಮಾವತಿ ಹೊಳೆಗೆ ಸೇತುವೆಯಿಂದ ಕೆಳಗೆ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದು ಕೃಷಿ ನೀರಿನ ಬಳಕೆಗಾಗಿ. ಇದೇ ಅಣೆಕಟ್ಟನ್ನು ಸೇತುವೆಯಿಂದ ಸ್ವಲ್ಪ ಮೇಲಿನ ಭಾಗದಲ್ಲಿ ಅಂದರೆ ಕುಡಿಯುವ ನೀರಿಗೆ ಪ್ರತೀ ವರ್ಷವೂ ಒಡ್ಡು ನಿರ್ಮಿಸುವಲ್ಲಿಯೇ ರಚಿಸಿದ್ದರೂ ಅನುಕೂಲವಾಗುತ್ತಿತ್ತು. ವಾರ್ಷಿಕ ಒಡ್ಡು ನಿರ್ಮಾಣಕ್ಕೆಂದು ಹಣ ಡ್ರಾ ಮಾಡುವುದು ತಪ್ಪುತ್ತಿತ್ತು. ರಾಜಕೀಯ ಕಾರಣಗಳಿಗಾಗಿ ಅಣೆಕಟ್ಟು ರಚನೆ ಬೇರೆ ಕಡೆ ಆಯಿತು. ಈಗ ತಾತ್ಕಾಲಿಕ ಒಡ್ಡು, ಮುಂದಿನ ವರ್ಷ ಶಾಶ್ವತ ಅಣೆಕಟ್ಟು ಆಗುತ್ತದೆ. ಆಗ ಎರಡೂ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಕ್ಕೆ ಇಲಾಖೆಗಳು ಸಮನ್ವಯ ಆಗಬೇಕಿದೆ. ನಗರ ಪಂಚಾಯತ್ ಚರಂಡಿ ನೀರಿಗೆ ಸೂಕ್ತ ಕ್ರಮ ಕೈಗೊಂಡರೆ ಲಾಲ ಜನತೆಗೆ ಕುಡಿಯಲು ನೀರು ಸಿಗುತ್ತಿತ್ತು.
ಕುಡಿಯುವ ನೀರಿನ ಸಮಸ್ಯೆಯಿದ್ದು ನೀರಿದ್ದರೂ ಏನೂ ಮಾಡದ ಸ್ಥಿತಿ ಬಂದೊದಗಿದೆ. ತ್ಯಾಜ್ಯದ ಅಂಶ ಸೇರದಿದ್ದರೆ ಲಾಯಿಲ ಜನತೆಗೆ ಇದನ್ನು ಶುದ್ಧೀಕರಿಸಿ ಕುಡಿಯಲು ನೀಡುವ ಯೋಜನೆ ಇತ್ತು.