ಉಳ್ಳಾಲ: ಜಿಲ್ಲೆ ಬರಗಾಲ ಪ್ರದೇಶ ಎಂದು ಘೋಷಣೆಯಾದರೂ , ಬೆಳ್ಮ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಸಕರ ಅನುದಾನದಡಿ ಕೆರೆ ಅಭಿವೃದ್ದಿಗೆ ಮುಂದಾದ ವೇಳೆ ಅಚ್ಚರಿ ಎಂಬಂತೆ ಏಕಾಏಕಿ ಅಂತರ್ಜಲ ಒಸರಿದ ಘಟನೆ ಪಂಚಾಯಿತಿ ವ್ಯಾಪ್ತಿಯ ಬೆಳ್ಮದೋಟ ಕುಡ್ಪಡ್ಪು ಎಂಬಲ್ಲಿ ಬುಧವಾರ ನಡೆದಿದೆ.
ಬೆಳ್ಮದೋಟದ ಕುಡ್ಪಡ್ಪುವಿನ ಸುಮಾರು 150 ಮನೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ಚಂದ್ರಹಾಸ್ ಶೆಟ್ಟಿ ಎಂಬವರ ಕೃಷಿ ಗದ್ದೆಯಲ್ಲಿ ಕೆರೆ ಅಭಿವೃದ್ದಿ ಕಾರ್ಯಕ್ಕೆ ಬೆಳ್ಮ ಗ್ರಾ.ಪಂ ಮುಂದಾಗಿತ್ತು. ಅಲ್ಲದೇ ಈ ಕಾರ್ಯಕ್ಕೆ ಸ್ಥಳೀಯ ಶಾಸಕ ಯು.ಟಿ.ಖಾದರ್ ಅನುದಾನದಿಂದ ಮೂರು ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಹೀಗಾಗಿ ಬುಧವಾರ ಬೆಳಿಗ್ಗೆ ಜೆಸಿಬಿ ಸಹಿತ ಕೆರೆ ಅಭಿವೃದ್ದಿ ಕಾರ್ಯಕ್ಕೆ ಪಂಚಾಯಿತಿ ಆಡಳಿತ ಮುಂದಾಗಿತ್ತು. ಗುದ್ದಲಿ ಪೂಜೆ ನಡೆಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಗದ್ದೆಗಿಳಿದ ಜೆಸಿಬಿ ವಾಹನ ಗದ್ದೆಯನ್ನು ಕೊರೆದು ಕೆರೆಯ ಮಾದರಿಗೆ ಪರಿವರ್ತಿಸಲು ಮುಂದಾದ ಕೇವಲ ಇಪ್ಪತ್ತು ನಿಮಿಷದಲ್ಲಿ ಅಲ್ಲೊಂದು ಅಚ್ಚರಿ ನಡೆದಿದೆ. ಹೊಂಡ ತೋಡಲು ಮುಂದಾಗುತ್ತಿದ್ದಂತೆ ಏಕಾಏಕಿ ಅಂತರ್ಜಲ ಚಿಮ್ಮಿದ್ದು, ದೊಡ್ಡ ಮಟ್ಟದಲ್ಲಿ ಒಸರು ಕಾಣಿಸಿಕೊಂಡಿದೆ. ಇದರಿಂದಾಗಿ ಸ್ಥಳೀಯ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೇ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಕೆರೆಗೆ ಅಭಿವೃದ್ದಿ ಕಾರ್ಯಕ್ಕೆ ಮುಂದಾಗಿದ್ದರೂ ಏಕಾಏಕಿ ನೀರು ಚಿಮ್ಮಿರುವುದು ಸ್ಥಳೀಯ ಸಂತಸಕ್ಕೆ ಕಾರಣವಾಗಿದೆ.
ನೀರು ಸಿಕ್ಕಿದ ಬೆನ್ನಲ್ಲೇ ಹೆಚ್ಚುವರಿ ಅನುದಾನ!
ಗದ್ದೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ನೀರು ಚಿಮ್ಮಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಶಾಸಕ ಖಾದರ್ ಗಮನಕ್ಕೆ ತಂದಿದ್ದಾರೆ. ಹೀಗಾಗಿ ತಕ್ಷಣ ಶಾಸಕರು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಮೂರು ಲಕ್ಷ ಅನುದಾನ ಬಿಡುಗಡೆಯಾಗಿ ಕೆಲಸ ಆರಂಭವಾಗಿದ್ದು, ನೀರು ಸಿಕ್ಕಿದ ಕಾರಣ ಹೆಚ್ಚುವರಿ ಅನುದಾನದ ಅಗತ್ಯವಿದೆ. ಹೀಗಾಗಿ ಮತ್ತೆ ಎರಡು ಲಕ್ಷ ಅನುದಾನ ನೀಡುವ ಮೂಲಕ ಅಂತರ್ಜಲವನ್ನು ರಕ್ಷಿಸಿ ಸುತ್ತಲಿನ ಸುಮಾರು 150 ಮನೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಶಾಸಕ ಖಾದರ್ ಸ್ಥಳೀಯಾಡಳಿತಕ್ಕೆ ಸೂಚಿಸಿದ್ದಾರೆ.
ಗದ್ದೆಯಲ್ಲಿ ಕೆರೆ ಅಭಿವೃದ್ಧಿಯ ಸಂದರ್ಭ ಏಕಾಏಕಿ ನೀರು ಕಾಣಿಸಿದ್ದು ತುಂಬಾ ಸಂತಸ ತಂದಿದೆ. ಸರಕಾರಿ ಜಾಗವನ್ನು ಹುಡುಕಿದರೂ ಕೆರೆ ಅಭಿವೃದ್ಧಿಗೆ ಸಮಪರ್ಕವಾದ ಜಾಗ ಈ ಪ್ರದೇಶದಲ್ಲಿ ಎಲ್ಲೂ ಸಿಗಲಿಲ್ಲ. ಈ ಸಮಯದಲ್ಲಿ ಚಂದ್ರಹಾಸ್ ಶೆಟ್ಟಿ ತಮ್ಮ ಜಾಗದಲ್ಲಿ ಕೆರೆ ಅಭಿವೃದ್ಧಿ ಪಡಿಸಲು ಜಾಗವನ್ನು ನೀಡಿದ್ದಾರೆ. ಈ ಮೂಲಕ ಸುಮಾರು 150 ಮನೆಗಳಿಗೆ ಈ ನೂತನ ಕೆರೆಯಿಂದ ನೀರನ್ನು ಪೂರೈಸಲಾಗುತ್ತದೆ. -ಅಬ್ದುಲ್ ಸತ್ತಾರ್ , ಉಪಾಧ್ಯಕ್ಷ ಬೆಳ್ಮ ಗ್ರಾಮಪಂಚಾಯಿತಿ