ಬಂಟ್ವಾಳ: ಹಾಡುಹಗಲೇ ಕಛೇರಿಗೆ ನುಗ್ಗಿದ ಮುಸುಕುಧಾರಿಗಳ ಗುಂಪೊಂದು ಗ್ರಾ.ಪಂ. ಉಪಾಧ್ಯಕ್ಷರ ಮೇಲೆ ತಲವಾರು ದಾಳಿ ನಡೆಸಿ , ಕೊಲೆಗೈದ ಭೀಕರ ಘಟನೆ ತಾಲೂಕಿನ ಕರೋಪಾಡಿ ಗ್ರಾಮಪಂಚಾಯತ್ ಕಛೇರಿಯಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ, ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್ ಕರೋಪಾಡಿ(42) ಮೃತ ಪಟ್ಟ ದುರ್ದೈವಿ. ಪಂಚಾಯತ್ ಆವರಣದಲ್ಲಿ ಕಾರು ನಿಲ್ಲಿಸಿ ಹೊರ ಹೋಗಿದ್ದವರು ಮತ್ತೆ ಪಂಚಾಯಿತಿಗೆ ಆಗಮಿಸಿ ಕಛೇರಿಯಲ್ಲಿ ಕುಳಿತಿದ್ದ ಸಮಯ ನಾಲ್ಕು ಮಂದಿ ಮುಸುಕುದಾರಿಗಳ ತಂಡ ನುಗ್ಗಿ ಮೆಣಸಿನ ಪುಡಿ ಎರಚಿ ತಲವಾರಿನಿಂದ ದಾಳಿ ನಡೆಸಿದೆ.
ದಾಳಿಯಿಂದ ಜಲೀಲ್ ಅವರ ತಲೆ, ಕುತ್ತಿಗೆ, ಹೊಟ್ಟೆಯ ಭಾಗಕ್ಕೆ ಯಧ್ವಾತದ್ವ ತಲವಾರಿನಿಂದ ಕಡಿದಿದ್ದಾರೆ. ದಾಳಿಕೋರರು ಬೈಕ್ ನಲ್ಲಿ ತೆರಳುತ್ತಿದ್ದಂತೆ ದಾಳಿ ನಡೆದಿರುವ ಮಾಹಿತಿ ಪಂಚಾಯಿತಿ ಸಿಬ್ಬಂದಿಗಳಿಗೆ ತಿಳಿದು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ಕಛೇರಿಯ ಒಳಗೆ ರಕ್ತ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸಹೋದರ ಅನ್ವರ್ ಕರೋಪಾಡಿ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆ ನಡೆಸಿ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಬಂಟ್ವಾಳ ಸಹಾಯ ಅಧೀಕ್ಷಕ ರವೀಶ್ ಸಿ. ಆರ್., ಪುತ್ತೂರು ಸಹಾಯ ಅಧೀಕ್ಷಕ ಭಾಸ್ಕರ ರೈ., ವೃತ್ತ ನಿರೀಕ್ಷಕ ಮಂಜಯ್ಯ, ಡಿಸಿಐಬಿ ನಿರೀಕ್ಷಕ ಅಮಲುಲ್ಲಾ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.
ಬೆರಳಚ್ಚು ತಜ್ಞರಾದ ಗೌರೀಶ್ ಅವರ ತಂಡ ಸ್ಥಳದಲ್ಲಿ ವಿವಿಧ ವಸ್ತುಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ವಿಟ್ಲ ಠಾಣಾ ಉಪನಿರೀಕ್ಷಕ ಬಂಟ್ವಾಳ ನಗರ ಠಾಣೆಯ ರಕ್ಷಿತ್ ಎಕೆ, ಗ್ರಾಮಾಂತರ ಠಾಣೆಯ ಉಮೇಶ್, ವೇಣೂರು ಠಾಣೆ ಲೋಲಾಕ್ಷ, ಧರ್ಮಸ್ಥಳ ಠಾಣೆಯ ಕೊರಗಪ್ಪ ನಾಯ್ಕ ಸೇರಿ ವಿವಿಧ ಠಾಣೆಗಳ ಉಪನಿರೀಕ್ಷಕರು ಸ್ಥಳಕ್ಕಾಗಮಿಸಿ ಬಂದೋಬಸ್ತು ಕಲ್ಪಿಸಿದರು.
ಕೇರಳ ಕಡೆಯಿಂದ ಬಂದ ದುಷ್ಕರ್ಮಿಗಳು ಈ ಕೃತ್ಯ ವೆಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದಾಗಿ ಸ್ಥಳದಲ್ಲಿ ಕೆಲಹೊತ್ತುಗಳ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಸುದ್ದಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂಜಾಗೃತ ಕ್ರಮ ಕೈಗೊಂಡರು. ಈ ಕೃತ್ಯಕ್ಕೆ ಸ್ಪಷ್ಟ ಕಾರಣ ಇದುವರಗೂ ತಿಳಿದು ಬಂದಿಲ್ಲ. ಕೊಲೆಗೀಡಾದ ಜಲೀಲ್ ಅವರ ವೈಯಕ್ತಿಕ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ದಾಳಿಯಿಂದ ಜಲೀಲ್ ಅವರ ತಲೆ, ಕುತ್ತಿಗೆ, ಹೊಟ್ಟೆಯ ಭಾಗಕ್ಕೆ ಯಧ್ವಾತದ್ವ ತಲವಾರಿನಿಂದ ಕಡಿದಿದ್ದಾರೆ. ವೃತ್ತಿಪರರೇ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ಜಲೀಲ್ ಪರಿಸರದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಇದ್ದು ವೈಯಕ್ತಿಕವಾಗಿ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಪೊಲೀಸರ ತನಿಖೆಯಿಂದ ಸತ್ಯ ಹೊರಬೇಕಾಗಿದೆ. ಕೊಲೆಗೀಡಾದ ಜಲೀಲ್ ತಂದೆ ಬಂಟ್ವಾಳ ತಾ.ಪಂ.ನ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರಂತೆ ರಾಜಕೀಯ ಹಾದಿ ತುಳಿದಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಕೊಂಡಿದ್ದ ಅವರು ಸಕ್ರಿಯ ಕಾರ್ಯಕರ್ತರೂ ಆಗಿದ್ದಾರೆ. ಕನ್ಯಾನ, ಕರೋಪಾಡಿ ಭಾಗದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತ ಜಲೀಲ್ರವರು ಪತ್ನಿ, ಓರ್ವ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಜಲೀಲ್ ಈ ಹಿಂದೆ ಪಂಚಾಯತ್ನ ಅಧ್ಯಕ್ಷರಾಗಿ ಇದೀಗ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಜಲೀಲ್ ಪಕ್ಷದ ರಾಜಮಟ್ಟದ ನಾಯಕರೊಂದಿಗೂ ಸಂಪರ್ಕವನ್ನು ಹೊಂದಿದ್ದರು. ಇದೀಗ ಜಲೀಲ್ ಅವರನ್ನು ಮುಸುಕುಧಾರಿ ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಕೊಲೆ ಪೂರ್ವ ಯೋಜಿತ ಕೃತ್ಯದಂತೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಪಂಚಾಯತ್ ನ ಸಿಬ್ಬಂದಿಗಳಿಬ್ಬರು ದುಷ್ಕರ್ಮಿಗಳು ಕಚೇರಿಗೆ ನುಗ್ಗುವ ವೇಳೆ ತಡೆಯೊಡ್ಡಿದ್ದರೂ ಅವರನ್ನು ಬೆದರಿಸಿ ಉಪಾಧ್ಯಕ್ಷರ ಕೊಠಡಿಗೆ ನುಗ್ಗಿ ಜಲೀಲ್ ನ ಕುತ್ತಿಗೆ ಭಾಗಕ್ಕೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಜಲೀಲ್ ಹತ್ಯೆಯ ಆರೋಪಿಗಳನ್ನು 24 ತಾಸಿನೊಳಗೆ ಆರೋಪಿಗಳ ಬಂಧಿಸುವುದಾಗಿ ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ತಿಳಿಸಿದ್ದಾರೆ. ಜಲೀಲ್ ಅವರ ಮೇಲೆ ತಲವಾರು ದಾಳಿ ನಡೆದ ಕರೋಪಾಡಿ ಗ್ರಾಮಪಂಚಾಯತ್ ನ ಸ್ಥಳಕ್ಕೆ ಭೇಟಿ ನೀಡಿದ ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೇ ಜಲೀಲ್ ಅವರನ್ನು ಕೊಲೆಗೈದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ವಿವಿಧ ತಂಡ ರಚಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.