ಕಾರ್ಕಳ: ಕಾರ್ಕಳ-ಮೂಳೂರು ನಡುವೆ ಹಾದು ಹೋಗಿರುವ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 66ಯು ಅಪಾಯಕಾರಿಯಾಗಿ ಪರಿಣಮಿಸಿದೆ.
ಉಡುಪಿ ಜಿಲ್ಲೆಯ ಗಡಿಯಂಚಿನ ಚಿಲಿಂಬಿಯಿಂದ ಮೂಳೂರು ವರೆಗಿನ ಸುಮಾರು 20 ಕಿ.ಮೀ ರಸ್ತೆ ವಿಸ್ತರಣೆಗಾಗಿ ಕೇಂದ್ರ ಸರಕಾರವು 29 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಂಡಿದೆ. ರಸ್ತೆ ಇಕ್ಕೆಲೆಗಳ ಸರಹದ್ದಿನೊಳಪಟ್ಟ ವಿದ್ಯುತ್ ಕಂಬಗಳ, ಕುಡಿಯುವ ನೀರಿನ ಪೈಪ್ ಗಳ ಸ್ಥಳಾಂತರ ಹಾಗೂ ಮರಗಳ ತೆರವು ಕಾರ್ಯ ನಡೆಯುವುದರೊಂದಿಗೆ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ನೂತನ ರಸ್ತೆ ವಿಸ್ತರಣ ಕಾಮಗಾರಿ ನಡೆಯಬೇಕಾಗಿದೆ. ತನ್ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ನೀಡುವುದು ಯೋಜನೆಯ ಮೂಲ ಉದ್ದೇಶವು ಆಗಿದೆ.
ಟೆಂಡರ್ ನಿಯಾಮಾವಳಿ ಸ್ವಷ್ಟ ಉಲ್ಲಂಘನೆ:
ರಸ್ತೆ ವಿಸ್ತರಣೆಯ ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳ, ಕುಡಿಯುವ ನೀರಿನ ಪೈಪ್ ಸ್ಥಳಾಂತರವು ಇನ್ನೂ ಬಾಕಿಯಾಗಿ ಉಳಿದಿದೆ. ಪರಿಣಾಮವಾಗಿ ಭಾರೀ ಗಾತ್ರದ ಪೈಪ್ ಗಳನ್ನು ಜೆಸಿಬಿಯ ಮೂಲಕ ಕಿತ್ತು ಹಾಕಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.
ಟೆಂಡರ್ ನಿಯಾಮಾವಳಿಯ ವಿರುದ್ಧವಾಗಿ ನಡೆದಿರುವ ಕಾಮಗಾರಿಯಿಂದಾಗಿ ಮಿಯ್ಯಾರು, ಮುಡಾರು ಗ್ರಾಮಸ್ಥರು ನೀರಿನ ತಾತ್ವಾರ ಎದುರಿಸುತ್ತಿದ್ದಾರೆ. ಕಡುಬೇಸಿಗೆ ಒಂದೆಡೆಯಲ್ಲಿ ಆರಂಭಗೊಂಡಿದ್ದು, ಮತ್ತೊಂದೆಡೆಯಲ್ಲಿ ಕಾಮಗಾರಿ ತರಾತುರಿಯಲ್ಲಿ ಆರಂಭಿಸಿರುವುದರಿಂದ ಅದಕ್ಕೆ ಅಗತ್ಯವಾದ ನೀರು ಬಳಸದೇ ಇರುವ ಅಂಶ ಬೆಳಕಿಗೆ ಬಂದಿದೆ. ವಿಸ್ತರಣೆಗೊಳಿಸಿದ ರಸ್ತೆಯ ಅಡಿಪಾಯ ಹಾಕಲಾಗಿರುವ ದೊಡ್ಡ ಗಾತ್ರ ಮತ್ತು ಸಣ್ಣ ಗಾತ್ರದ ಜಲ್ಲಿಕಲ್ಲುಗಳು, ಜಲ್ಲಿಪುಡಿ, ಸಿಮೆಂಟ್ ಇದರ ಮಿಶ್ರಣಕ್ಕೆ ಅಗತ್ಯವಾದ ನೀರನ್ನೇ ಬಳಸದೇ ಒಣ ಮಿಶ್ರಣವನ್ನೇ ಕಾಮಗಾರಿಗೆ ಉಪಯೋಗಿಸಿರುವುದು ಕಂಡುಬಂದಿದೆ. ಇದರಿಂದ ಅಡಿಪಾಯ ಮೃಧುವಾಗಿ ಮಳೆಗಾಲದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಲಿದೆ. ಹಾಕಲಾದ ಡಾಂಬರು ಮಣ್ಣುಪಾಲಾಗುವ ಸಾಧ್ಯತೆಗಳು ಹೆಚ್ಚಗಲಿದೆ.
ಮೋರಿ ಎಲ್ಲಿಯೋ ರಸ್ತೆ ಇನ್ಯಾಲಿಯೋ!:
ರಸ್ತೆ ವಿಸ್ತರಣೆಗೆ ಅನುಗುಣವಾಗಿ ಅಲ್ಲಲ್ಲಿ ರಸ್ತೆ ತಳಭಾಗದಲ್ಲಿ ಭಾರೀ ಗಾತ್ರದ ಮೋರಿಗಳನ್ನು ರಚಿಸಲಾಗಿದೆ. ನೂತನ ರಸ್ತೆಯು ಮೋರಿಯ ದಂಡೆ ಮೇಲಿನಿಂದಲೇ ಹಾದು ಹೋಗಿದೆ. ಇದು ವಾಹನ ಅಪಘಾತಕ್ಕೆ ಆಹ್ವಾನಿಸುವಂತಿದೆ.
ವಿದ್ಯುತ್ ಕಂಬಗಳು, ಆಧಾರ ತಂತಿಗಳು, ಹೈಟೆಕ್ಷನ್ ತಂತಿಗಳು..
ರಸ್ತೆಯ ಮೇಲ್ಭಾಗದಲ್ಲಿ ವಿದ್ಯುತ್ ಕಂಬಗಳು ಹಾಗೆಯೇ ಉಳಿದಿದೆ. ಕೆಲವೆಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿಗಳು ರಸ್ತೆ ಮೇಲ್ಭಾಗದಲ್ಲಿಯೇ ಉಳಿದುಕೊಂಡಿದೆ. ರಾತ್ರಿ ವೇಳೆಗೆ ವಿದ್ಯುತ್ ದಾರಿ ದೀಪಗಳೇ ಇಲ್ಲದ ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೂ ಕಷ್ಟಕರವಾಗಿ ಪರಿಣಮಿಸಿದೆ. ಕೆಲ ವಾಹನಗಳು ಇದರಿಂದ ಅಪಫಾತಕ್ಕೀಡಾದ ಘಟನಾವಳಿ ನಡೆದಿದೆ. ಇದೇ ಕಾರಣದಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಥಳೀಯ ನಾಗರಿಕರೇ ಕಲ್ಲುಗಳನ್ನು ಅಡ್ಡ ಇಟ್ಟು, ಬಟ್ಟೆಗಳನ್ನು ಅದಕ್ಕೆ ಕಟ್ಟಿ ಸಮಾಜ ಸೇವೆ ಮೆರೆದಿದ್ದಾರೆ.
ಮಿಯ್ಯಾರುನಿಂದ ನಲ್ಲೂರು ಬಸದಿಗೆ ಹೋಗುವ ಕೂಡು ರಸ್ತೆಯ ಅನತಿ ದೂರದಲ್ಲಿ ಇರುವ ಕಿರುಸೇತುವೆಗೆ ತಾಗಿಕೊಂಡು ಇರುವ ಪ್ರದೇಶದಲ್ಲಿ ಹೈಟೆಕ್ಷನ್ ತಂತಿ ಮಾನವನ ಕೈಗೆ ಎಟ್ಟಕುವ ಸ್ಥಿತಿಯಲ್ಲಿ ನೇತಾಡುತ್ತಿದೆ. ಇದರಿಂದ ಜೀವಕ್ಕೆ ಸಂಚಕಾರ ಎದುರಾದರೂ ಅಶ್ಚರ್ಯವಿಲ್ಲ. ಮಿಯ್ಯಾರು ಪ್ರದೇಶವು ಅಪಘಾತವಲಯವಾಗಿದ್ದು ಕಂಟ್ರಾಕ್ಟರ್ ದಾರ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಇನ್ನಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ.
ಬೇಜವಾಬ್ದಾರಿತನ ವರ್ತಿಸಿದ ಇಲಾಖಾಧಿಕಾರಿಗಳು:
ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಆರೋಪಗಳ ಸುರಿಮಳೆ ಕೇಳಿಬರುತ್ತಿರಲು ಇಲಾಖಾಧಿಕಾರಿಗಳ ಬೇಜವ್ದಾರಿತನವೇ ಕಾರಣವಾಗಿದೆ. ಕಾಮಗಾರಿಯ ಗುಣಮಟ್ಟ ಕಾಪಾಡದೇ, ರಸ್ತೆ ಸುಗಮ ಸಂಚಾರದ ನಿಯಾವುವಳಿ ಪಡಿಪಾಲಿಸದೇ, ಬೇಕಾಬಿಟ್ಟಿಯಾಗಿ ತುರ್ತು ಕಾಮಗಾರಿ ನಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗದ ಒಬ್ಬನೇ ಒಬ್ಬ ಇಲಾಖಾಧಿಕಾರಿ ಇತ್ತ ಮುಖ ಮಾಡದೇ ಇರುವುದು ಕಾರಣವೆನ್ನಲಾಗಿದೆ.
ರಸ್ತೆ ಅಭಿವೃದ್ಧಿಯ ನೆಪದಲ್ಲಿ ಧರೆಗುರುಳಿದ ಹೆಮ್ಮರಗಳು:
ರಸ್ತೆ ಅಭಿವೃದ್ಧಿಯ ಕಾರ್ಯಕ್ಕೆ ಎಲ್ಲಾ ಇಲಾಖೆಗಿಂತ ಅರಣ್ಯ ಇಲಾಖೆಯೇ ಹೆಚ್ಚಾಗಿ ಸಹಕರಿಸುತ್ತದೆ ಎಂಬುದನ್ನು ಇಲ್ಲಿ ರುಜುಪಡಿಸುತ್ತದೆ. ರಸ್ತೆ ಮಾರ್ಜಿನ್ನೊಳಗಿದ್ದ ಅಕೇಶಿಯಾ ಹೆಮ್ಮರಗಳು ಧರೆಗುರುಳಿದರೂ, ರಸ್ತೆ ಮೇಲಿರುವ ವಿದ್ಯುತ್ ಕಂಬ ತೆರವುಗೊಳಿಸಲು ಮೀನಾಮೇಷ ಎಣಿಸುವ ಪ್ರಕ್ರಿಯೆ ನಡೆಯುತ್ತಿವೆ.
ಶೇ.10 ಮೊತ್ತವನ್ನು ಕಂಟ್ರಾಕ್ಟರ್ ದಾರರೇ ಪಾವತಿಸಬೇಕು:
ಮೆಸ್ಕಾಂ ಇಲಾಖೆಯ ಅಧೀನದಲ್ಲಿ ಇರುವ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮ್, ಹೈಟೆಕ್ಷನ್ ತಂತಿಗಳ ಸ್ಥಳಾಂತರಕ್ಕೆ ತಗಲುವ ವೆಚ್ಚದಲ್ಲಿ ಶೇ. 10ರಷ್ಟು ಮೊತ್ತವನ್ನು ರಸ್ತೆ ವಿಸ್ತರಣೆಯ ಕಾಮಗಾರಿ ವಹಿಸಿಕೊಂಡಿರುವ ಕಂಟ್ರಾಕ್ಟರ್ದಾರ ಪಾವತಿಸಬೇಕಾಗುತ್ತದೆ. ಇಂತಹ ಪ್ರಕ್ರಿಯೆ ನಡೆಯುವ ಮುನ್ನವೇ ತರಾತುರಿಯಲ್ಲಿ ಕಾಮಗಾರಿ ನಡೆಸಲು ಒತ್ತಡ ಹಾಕಿರುವವರು ಯಾರೆಂಬುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಪ್ರಸ್ತುತ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ರಸ್ತೆ ಮೇಲ್ಭಾಗದಲ್ಲಿ ಇರುವ ವಿದ್ಯುತ್ ಕಂಬಗಳು ಹಾಗೆಯೇ ಉಳಿದಿದ್ದು ಅದರ ಒಂದು ಮೀಟರ್ ವರ್ತುಲದಲ್ಲಿ ರೋಲರ್ ಹಾಯಿಸದೇ ಇರುವುದರಿಂದ ರಸ್ತೆಯ ತಳಭಾಗವನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಈ ಎಲ್ಲ ಎಡವಟ್ಟು ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.