News Kannada
Thursday, September 29 2022

ಕರಾವಳಿ

ವರುಣಕೃಪೆ: ಬರದ ಆತಂಕ ದೂರ - 1 min read

Photo Credit :

 ವರುಣಕೃಪೆ: ಬರದ ಆತಂಕ ದೂರ

ಸುಳ್ಯ: ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯ ಪರಿಣಾಮದಿಂದಾಗಿ ಸುಳ್ಯ ತಾಲೂಕಿನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಎದುರಾಗಬಹುದಾದ ಭೀಕರ ಬರಗಾಲದ ಆತಂಕ ಸ್ವಲ್ಪ ಮಟ್ಟಿಗೆ ಮಾಯವಾಗಿದೆ. ಸುಳ್ಯದ ಜೀವ ನದಿ ಪಯಸ್ವಿನಿಗೆ ಮತ್ತೆ ಜೀವ ಕಳೆ ಬಂದಿದ್ದು ಬತ್ತಿ ಬರಡಾಗಿದ್ದ ಪಯಸ್ವಿನಿಯಲ್ಲಿ ಮತ್ತೆ ನೀರಿನ ಹರಿವು ಹೆಚ್ಚಳವಾಗಿದೆ.

ಕಳೆದ ಮಳೆಗಾಲದಲ್ಲಿ ಬೇಗನೇ ಮಾಯವಾದ ಮತ್ತು ಲೆಕ್ಕಕ್ಕಿಂತ ಕಡಿಮೆ ಸುರಿದ ಮಳೆಯ ಪರಿಣಾಮ ಮತ್ತು ಬಲು ಬೇಗ ಬಂದ ಬೇಸಿಗೆಯ ಉರಿ ಧಗೆಯ ಪರಿಣಾಮ ಪಯಸ್ವಿನಿ ನದಿ ಮತ್ತು ಇತರ ನೀರಿನ ಮೂಲಗಳು ಜನವರಿ-ಫೆಬ್ರವರಿ ತಿಂಗಳಲ್ಲಿಯೇ ಬತ್ತಿ ಬರಡಾಗಿತ್ತು. ಕಳೆದ 15 ದಿನಗಳಲ್ಲಿ ದಿನ ದಿನ ಬಿಟ್ಟು ಸುರಿದ ಮಳೆಯಿಂದ ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ.  ಕಳೆದ ವರ್ಷದಂತೆ ಈ ವರ್ಷವೂ ಮಲೆನಾಡಾದ ಸುಳ್ಯ ತಾಲೂಕಿನಲ್ಲಿ ಬರಗಾಲದ ಕರಿ ನೆರಳು ಅಪ್ಪಳಿಸಬಹುದೇ ಎಂಬ ಆತಂಕ ಕಾಡಿತ್ತು. ಕಳೆದ ವರ್ಷ ಜನರನ್ನು ಕಾಡಿದ್ದ ಬರಗಾಲ, ಕೃಷಿ ವಲಯಕ್ಕೂ ಜೀವ ಜಾಲಕ್ಕೂ ಕುತ್ತು ತಂದಿತ್ತು. ಅದರ ಕಹಿ ನೆನಪು ಮಾಸುವ ಮುನ್ನವೇ ಈ ಬಾರಿಯೂ ಬೇಸಿಗೆ ಕೃಷಿ ವಲಯಕ್ಕೆ ಮಾರಕವಾಗಬಹುದೇ ಎಂಬ ಆತಂಕ ಕೃಷಿಕರನ್ನು  ತಲ್ಲಣಗೊಳಿಸಿತ್ತು. ಆದರೆ ಈ ಬಾರಿ ವರವಾಗಿ ಬಂದ ಮಳೆಯು ಕೃಷಿಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಳೆದ ಅಕ್ಟೋಬರ್, ನವೆಂಬರ್, ಡಿಸೆಂಬರ್, ತಿಂಗಳುಗಳಲ್ಲಿ  ಅತೀ ಕಡಿಮೆ ಮಳೆ ಸುರಿದಿತ್ತು. ಮಳೆ ಇಲ್ಲದೆ ತಿಂಗಳುಗಳೇ ಕಳೆದ ಕಾರಣ ಜನವರಿ ವೇಳೆಗೆ ನದಿ, ಹಳ್ಳ, ಕೊಳ್ಳ, ಬಾವಿ, ಕೆರೆಗಳು ಬತ್ತಿ ಬರಡಾಗಿತ್ತು. ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯದೇ ಆಗೊಮ್ಮೆ ಈಗೊಮ್ಮೆ ಮಳೆ ಬಂದ ಕಾರಣ ಹೊಸ ಒರತೆಗಳು ಎದ್ದು ಪಸಂದಾಗಿ ನೀರು ಹರಿದಿಲ್ಲ.  ನದಿ ಹಳ್ಳ ಕೊಳ್ಳಗಳಲ್ಲಿ ಇದ್ದಂತಹಾ ನೀರು ಸ್ವಲ್ಪ ಹೆಚ್ಚಾಗಿ ಹರಿದದ್ದು ಬಿಟ್ಟರೆ ತುಂಬಿ ತುಳುಕಿ ಭೋರ್ಗರೆದು ಹರಿಯಲೇ ಇಲ್ಲ. ಜೀವನದಿ ಪಯಸ್ವಿನಿಯಲ್ಲಿ ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಫೆಬ್ರವರಿಯಲ್ಲಿಯೇ ನೀರಿನ ಹರಿವು ತೀರಾ ಕಡಿಮೆಯಾಗಿ ಬತ್ತಿ ಹೋಗಿತ್ತು.

ಕಳೆದ ವರ್ಷ ಬೇಸಿಗೆಯಲ್ಲಿ ಈ ಭಾಗದಲ್ಲಿ ಭೀಕರ ಬರಗಾಲವೇ ಅಪ್ಪಳಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು ಜೊತೆಗೆ ಹಲವಾರು ಎಕ್ರೆ ಅಡಕೆ ತೋಟಗಳು ಬಿಸಿಲ ಕೆನ್ನಾಲಿಗೆಗೆ ತುತ್ತಾಗಿ ಒಣಗಿ ಕರಟಿ ಹೋಗಿತ್ತು. ಇದು ಈ ಬಾರಿಯ ಅಡಕೆಯ ಫಸಲಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. ಭೀಕರ ಬರಗಾಲ ಜನತೆಯ ಜೀವ ಜಲಕ್ಕೆ ಕುತ್ತು ತಂದಿರುವುದರ ಜೊತೆಗೆ ಕೃಷಿ ವಲಯಕ್ಕೂ ಮರ್ಮಾಘಾತವನ್ನಿಕ್ಕಿತ್ತು. ಪರಿಣಾಮವಾಗಿ ಕೃಷಿಕರ ಬದುಕಿನ ನಿರೀಕ್ಷೆಯಾದ ಕೃಷಿಯು ಸಂಪೂರ್ಣ ಕರಟಿ ಹೋಗಿತ್ತು.  ನದಿ, ಹಳ್ಳ ಕೊಳ್ಳಗಳು, ಕೆರೆ, ಬಾವಿಗಳು ಬತ್ತಿ ಹೋಗಿ ನೀರುಣಿಸಲಾಗದೆ  ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಮತ್ತು ಗಡಿ ಗ್ರಾಮಗಳಲ್ಲಿ ಬರ ಕೃಷಿಯನ್ನು ಸಂಪೂರ್ಣ ಆಪೋಷನ ತೆಗೆದುಕೊಂಡಿತ್ತು. ಕಳೆದ ಬೇಸಿಗೆಯಲ್ಲಿ ಒಂದೂವವರೆ ತಿಂಗಳಿಗಿಂತ ಹೆಚ್ಚು ಸಮಯ ಅಡಕೆ ತೋಟಕ್ಕೆ ನೀರು ಹಾಯಿಸಲು ಸಾಧ್ಯವಾಗದ ಕಾರಣ  ಅಡಕೆ ತೋಟ ಸಂಪೂರ್ಣ ಒಣಗಿ ಹೋಗಿತ್ತು. ಅಡಕೆಯ ಹಸಿರು ಮಾಯವಾಗಿ ಬೆಂಕಿ ಹಾಯಿಸಿದಂತೆ ಕೆಂಪಾಗಿ ಅಡಕೆ ಮರವೇ ಒಣಗಿ ನೂರಾರು ಹೆಕ್ಟೇರ್ ಅಡಕೆ ಕೃಷಿ ನಾಶವಾಗಿ ಜೊತೆಗೆ  ಅಡಕೆ ಮರದಲ್ಲಿದ್ದ ಮಿಡಿಗಳು ಸಂಪೂರ್ಣ ಧರಾಶಾಯಿಯಾಗಿತ್ತು. ಇದರಿಂದ ಈ ವರ್ಷ ಶೇ.40ಕ್ಕಿಂತಲೂ ಹೆಚ್ಚು ಅಡಕೆ ಫಸಲು ಕಡಿಮೆಯಾಗಿತ್ತು.

See also  ಬಿಜೆಪಿ ಕಾರ್ಯಕರ್ತರು- ಪೊಲೀಸರ ನಡುವೆ ನೂಕು ತಳ್ಳಾಟ

ಕೃಷಿ ವಲಯಕ್ಕೆ ನಿರೀಕ್ಷೆ:
ಈ ಬಾರಿ ಉತ್ತಮ ಚಳಿ, ಬಿಸಿಲು ಮತ್ತು ಈಗ ಮಳೆ ದೊರೆತಿರುವುದು ಕೃಷಿಗೆ ಉತ್ತಮ ವಾತಾವರಣವನ್ನು ನೀಡಿದೆ. ಮಳೆ ಸುರಿದ ಕಾರಣ ಬರದ ಕರಿಛಾಯೆ ದೂರವಾಗುವುದರ ಜೊತೆಗೆ ಕೃಷಿ ವಲಯಕ್ಕೂ ನಿರೀಕ್ಷೆ ಹುಟ್ಟಿಸಿದೆ. ಅಡಕೆ ಮಾತ್ರವಲ್ಲದೆ ತೆಂಗು, ಕರಿಮೆಣಸು, ಬಾಳೆ, ಕೊಕ್ಕೋ ಕೃಷಿಗೂ, ಗೇರು, ರಬ್ಬರ್ ಕೃಷಿಗೂ ಉತ್ತಮ ವಾತಾವರಣವಿದೆ. ಮಳೆ ಮತ್ತು ವಾತಾವರಣ ಮುಂದುವರಿದರೆ ಉತ್ತಮ ಎಂಬುದು ಕೃಷಿಕರ ಅಭಿಪ್ರಾಯ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ ದೊರೆತರೆ ಕೃಷಿ ಫಸಲು ಉತ್ತಮವಾಗಬಹುದು ಎಂಬುದು ಕೃಷಿಕರ ನಿರೀಕ್ಷೆ.

ಸುಧಾರಿಸಿದ ನೀರಿನ ಮಟ್ಟ:
ಈ ಬಾರಿ ಉತ್ತಮ ಮಳೆ ಸುರಿದ ಕಾರಣ ಒಣಗಲು ಆರಂಭಿಸಿದ್ದ ಕೃಷಿ ತೋಟಗಳು, ಮರ ಗಿಡಗಳು ನಿಧಾನಕ್ಕೆ ತನ್ನ ಹಸಿರನ್ನು ಮರಳಿ ಪಡೆಯುತಿದೆ. ಮಳೆ ಸುರಿದ ಕಾರಣ ಕೆಲವು ಕಡೆ ಕೃಷಿಕರು ತೋಟಕ್ಕೆ ನೀರು ಹಾಕುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಆದರೆ ಸುಳ್ಯ ಪರಿಸರದಲ್ಲಿ ಸೆಕೆಯು ಈಗಲೂ ಏರುಗತಿಯಲ್ಲಿದೆ. ಇದರಿಂದ ಮಳೆ ಸುರಿದರೂ ಕೆಲವು ಕಡೆಯಲ್ಲಿ ನೀರು ಹಾಯಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಕೃಷಿಕರು. ತಾಲೂಕಿನಲ್ಲಿ ಎಲ್ಲಡೆ ಉತ್ತಮ ಮಳೆ ದೊರೆತಿಲ್ಲ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರೆ ಇನ್ನು ಕೆಲವೆಡೆ ಸಾಮಾನ್ಯ ಮಳೆ ಸುರಿದಿದೆ ಅಷ್ಟೆ. ಆದರೂ ಮಳೆ ದೊರೆತಿರುವುದರಿಂದ ಎಲ್ಲೆಡೆ ನೀರಿನ ಪರಿಸ್ಥಿತಿ ಸುಧಾರಿಸಿದೆ.

ಕಳೆದ ಬೇಸಿಗೆಯಲ್ಲಿ ಉಂಟಾದ ಬರಗಾಲ ಸುಳ್ಯ ನಗರದಲ್ಲಿ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರವನ್ನು ಉಂಟು ಮಾಡಿತ್ತು. ಈ ವರ್ಷವೂ ಜನವರಿ ಫೆಬ್ರವರಿ ತಿಂಗಳಲ್ಲಿ ನೀರಿನ ತತ್ವಾರ ಎದುರಾಗಿತ್ತು. ಆದರೆ ಉತ್ತಮ ಮಳೆ ಸುರಿದ ಕಾರಣ ನೀರಿನ ಮೂಲಗಳಲ್ಲಿ ಒಳ ಹರಿವು ಹೆಚ್ಚಿದ್ದು ಆತಂಕ ದೂರವಾಗಿದೆ. ಸುಳ್ಯ ನಗರಕ್ಕೆ ನೀರು ಪೂರೈಸಲು ನಗರ ಪಂಚಾಯಿತಿ ಕಲ್ಲುಮುಟ್ಲುವಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಮರಳು ತುಂಬಿದ ಚೀಲವನ್ನು ಬಳಸಿ ನಿರ್ಮಿಸುವ ತಾತ್ಕಾಲಿಕ ಕಟ್ಟವನ್ನು ನಿರ್ಮಿಸಲಾಗಿದೆ. ಮಳೆ ಬಂದ ಕಾರಣ ಕಟ್ಟ ತುಂಬಿ ಹರಿಯುತಿದೆ.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು