ಕಾಸರಗೋಡು: ಬಂದಡ್ಕ ಸುಮಂಗಲಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಸುಳಿವು ಪೊಲೀಸರಿಗೆ ಲಭಿಸಿದೆ. ಬೆರಳಚ್ಚು ಲಭಿಸಿದ್ದು, ಈ ಹಿಂದೆ ಜುವೆಲ್ಲರಿ ದರೋಡೆ ಕೃತ್ಯದಲ್ಲಿ ಶಾಮೀಲಾದವರೇ ಈ ದರೋಡೆ ನಡೆಸಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಜುವೆಲ್ಲರಿ ಹಿಂಬದಿಯಲ್ಲಿ ಕೈ ಕವಚ ಲಭಿಸಿದ್ದು, ಇದು ಕಳ್ಳರದ್ದೆಂದು ಪೊಲೀಸರು ತಿಳಿಸಿದ್ದಾರೆ. ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಸೇರಿದಂತೆ ಒಟ್ಟು ೧೫.೪೧ ಲಕ್ಷ ರೂ. ಮೌಲ್ಯದ ಸೊತ್ತು ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಜ್ಯೂವೆಲ್ಲರಿಯ ಹಿಂಭಾಗದ ಗೋಡೆ ಕೊರೆದು ಕಳ್ಳರು ಒಳ ನುಗ್ಗಿದ್ದು, ಐದಕ್ಕಿಂತ ಅಧಿಕ ಮಂದಿ ಈ ತಂಡದಲ್ಲಿದ್ದಾರೆಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಬೆಳಿಗ್ಗೆ ಸಿಬಂದಿಗಳು ಬಂದು ಶಟರ್ ತೆರೆದಾಗ ಹಿಂಬದಿ ಗೋಡೆ ಕೊರೆದಿರುವುದು ಕಂಡುಬಂದಿತ್ತು. ದರೋಡೆಕೋರರಿಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.