ಬಂಟ್ವಾಳ: ಅಕ್ರಮ ಮರಳು ಸಾಗಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಕ್ರಮ ಮರಳು ಸಾಗಾಟ ಮಾಡುವವರ ಮೇಲೆ ರೌಡಿ ಶೀಟರ್ ಕೇಸ್ ಹಾಕಿ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದರು.
ಬಂಟ್ವಾಳ ನಗರ ಠಾಣೆಯಲ್ಲಿ ರವಿವಾರ ನಡೆದ ದಕ್ಷಿಣ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗ್ಗೆ ದೂರುಗಳು ಕೇಳಿ ಬಂದವು. ಸಭೆಯ ಆರಂಭದಲ್ಲಿ ಮಾತನಾಡಿದ ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್, ಅಕ್ರಮ ಮರಳು ಸಾಗಾಟ ವಿರುದ್ಧ ಕ್ರಮ ಕೈಗೊಳ್ಳುವಾಗ ಪೊಲೀಸರು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಜಿಲ್ಲೆಯಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ 10, 12 ಚಕ್ರಗಳ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವಾಗ ಕ್ರಮ ಕೈಗೊಳ್ಳದ ಪೊಲೀಸರು, ಸರಕಾರದ ಅನುದಾನದಲ್ಲಿ ಮನೆ ನಿರ್ಮಿಸಲು ಬಡವರು ಒಂದು ಲೋಡ್ ಮರಳು ಸಾಗಾಟ ಮಾಡುವಾಗ ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ದಲಿತ ನಾಯಕ ಶೇಖರ್ ಬೆಳ್ತಂಗಡಿ, ಆಶ್ರಯ ಯೋಜನೆಯಲ್ಲಿ ಮಂಜೂರಾಗುವ ಮನೆಯನ್ನು ಒಂದು ವರ್ಷದ ಅವದಿಯೊಳಗೆ ಕಟ್ಟಿ ಮುಗಿಸಬೇಕಾಗಿದೆ. ಆದರೆ ಮರಳಿನ ಸಮಸ್ಯೆಯಿಂದ ಬಡವರಿಗೆ ಮನೆ ನಿರ್ಮಿಸಲು ಸಾಧ್ಯವಾಗದೆ ಅನುದಾನ ವಾಪಸ್ ಹೋಗುತ್ತಿದೆ ಎಂದು ಹೇಳಿದರು. ಹೀಗೆ ಸಭೆಯುದ್ದಕ್ಕೂ ಮಾತನಾಡಿದ ಪ್ರತೀಯೊಬ್ಬರು ಮರಳು ಮಾಫಿಯಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಮನೆ ನಿರ್ಮಾಣಕ್ಕೆ ಪಿಡಬ್ಲ್ಯೂಡಿ ವತಿಯಿಂದ ಇರುವ ಯಾರ್ಡ್ ನಿಂದ ಮರಳು ಪಡೆದು ಸಾಗಾಟ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸಲಹೆ ನೀಡಿದಾಗ ಬಂಟ್ವಾಳದಲ್ಲಿ ಪಿಡಬ್ಲ್ಯೂಡಿಯಿಂದ ಮರಳು ವಿತರಣೆಯಾಗುತ್ತಿಲ್ಲ ಎಂದು ಸಭೆಯಲ್ಲಿದ್ದ ದಲಿತ ಮುಖಂಡರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಮೊದಲು ಮರಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಸರಕಾರ ಮರಳು ನೀತಿ ಎಂಬ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಮರಳು ಮಾಫಿಯಾವನ್ನು ಸೃಷ್ಟಿ ಮಾಡಿದೆ. ಪೊಲೀಸರ ಹಾಗೂ ಜನಪ್ರತಿನಿಧಿಗಳ ಕೃಪಕಟಾಕ್ಷವಿದ್ದವರಿಗೆ ಎಲ್ಲಿಂದ ಎಲ್ಲಿಗೆ ಮರಳು ಸಾಗಾಟ ಮಾಡಲು ಯವುದೇ ನೀತಿ ಅನ್ವಯವಾಗುವುದಿಲ್ಲ. ಬಡವರಿಗೆ ಮಾತ್ರ ಇದರಿಂದ ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಅಕ್ರಮ ಮರಳು ಸಾಗಾಟ ಕಂಡು ಬಂದರೆ ಭೂಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿರಿ. ಗಣಿ ಇಲಾಖೆಯ ಅಧಿಕಾರಿಗಳಿಗೆ ರಕ್ಷಣೆ ನೀಡುವ ಕೆಲಸ ಪೊಲೀಸರು ಮಾಡುತ್ತಾರೆ. ಇನ್ನು ಮುಂದೆ ಅಕ್ರಮವಾಗಿ ಮರಳು ಸಾಗಾಟ ಮಾಡುವ ಲಾರಿ ಚಾಲಕ, ಕ್ಲೀನರ್ ಹಾಗೂ ಲಾರಿ ಮಾಲಕನ ವಿರುದ್ಧ ರೌಡಿ ಶೀಟರ್ ಕೇಸ್ ಹಾಕಲಾಗುವುದು. ಎರಡನೇ ಬಾರಿ ಅಕ್ರಮ ಮರಳು ಸಾಗಾಟ ಮಾಡಿ ಸಿಕ್ಕಿ ಬಿದ್ದರೆ 5 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಹೇಳಿದರು.
ಹಾಗೆಯೇ ಸಭೆಯಲ್ಲಿ ಜಿಲ್ಲೆಯಲ್ಲಿ ಅವ್ಯವಹತವಾಗಿ ನಡೆಯುತ್ತಿರುವ ಗಾಂಜಾ ಮಾಫಿಯಾ, ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು, ನಗರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆರೋಗ್ಯ ಸುರಕ್ಷಾ ಕವಚ, ಇಫ್, ಪಿಎಫ್ ಹಾಗೂ ಇತರ ಸೌಲಭ್ಯಗಳನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿರುವುದು, ಸರಕಾರದ ಆಧೀನದಲ್ಲಿರುವ ದೇವಾಸ್ಥಾನಗಳಿಗೆ ಎಸ್ಸಿ-ಎಸ್ಟಿಯವರನ್ನು ಟ್ರಸ್ಟಿಯಾಗಿ ನೇಮಕಮಾಡದಿರುವುದು, ಅಕ್ರಮ ಕಲ್ಲು ಗಣಿಗಾರಿಕೆ, ಸಮಾಜದಲ್ಲಿ ಹೆಚ್ಚಿರುವ ಜೋತಿಷ್ಯರ ಹಾವಲಿ, ಖಾಸಗಿ ಚಿಟ್ ಫಂಡ್ಗಳಿಂದ ಸಾರ್ವಜನಿಕರಿಗೆ ಮೋಸ ಮೊದಲಾದ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಪ್ರಭಾರ ಎಸ್ಪಿ ಪ್ರಭಾಕರ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ಎಸ್ಸೈ ಎ.ಕೆ.ರಕ್ಷಿತ್ ಹಾಗೂ ಜಿಲ್ಲೆಯ ವಿವಿಧ ದಲಿತ ಮುಖಂಡರು ಉಪಸ್ಥಿತರಿದ್ದರು.