ಕಾಸರಗೋಡು: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ರವರ ಕೊಲೆ ಕೃತ್ಯಕ್ಕೆ ಬಳಸಿದ್ದ ಮಾರಕಾಯುಧ, ಎರಡು ನಂಬರ್ ಪ್ಲೇಟ್ ಇಲ್ಲದ ಬೈಕ್, ರಕ್ತ ಸಿಕ್ತ ಬಟ್ಟೆ ಬರೆಗಳು ಮಿತ್ತನಡ್ಕ ಸಮೀಪದ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಎರಡು ತಲವಾರು ಕೂಡಾ ಪತ್ತೆಯಾಗಿದೆ. ಬಾಯಾರು – ಮಿತ್ತನಡ್ಕ ರಸ್ತೆಯ ಮುಗುಳಿ ಚಳ್ಳಂಗರ ಎಂಬಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿಯಂತೆ ವಿಟ್ಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಎಪ್ರಿಲ್ 20 ರಂದು ಕೃತ್ಯ ನಡೆದಿತ್ತು. ಕೃತ್ಯ ನಡೆಸಿದ ಬಳಿಕ ಹಂತಕರು ಬಾಯಾರು ರಸ್ತೆಯಾಗಿ ಬಂದು ಮಾರಕಾಯುಧ, ಬೈಕ್ ಮೊದಲಾದವುಗಳನ್ನು ಪೊದೆಯಲ್ಲಿ ಬಚ್ಚಿಟ್ಟು, ರಕ್ತಸಿಕ್ತ ಬಟ್ಟೆ ಬರೆಗಳನ್ನು ಬದಲಾಯಿಸಿ ಅಲ್ಲಿಂದ ಬೇರೆ ವಾಹನ ಗಳ ಮೂಲಕ ಉಪ್ಪಳಕ್ಕೆ ತಲುಪಿ ಅಲ್ಲಿಂದ ಬೇರೆ ಸ್ಥಳಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಸುದ್ದಿ ತಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರೂ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದೀಗ ಬೈಕ್, ಮಾರಕಾಯುಧ ಪತ್ತೆಯಾಗಿರುವುದು ನಿರ್ಣಾಯಕ ಸುಳಿವು ತನಿಖಾ ತಂಡಕ್ಕೆ ಲಭಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.