ಪುತ್ತೂರು: ರಾತ್ರಿಯ ಊಟಕ್ಕೆ ಪದಾರ್ಥ ಚೆನ್ನಾಗಿ ಮಾಡಿಲ್ಲ ಎಂಬ ಸಿಟ್ಟಿನಿಂದ ಪತ್ನಿಗೆ ಯದ್ವಾತದ್ವಾ ಹೊಡೆದು ಆಕೆಯನ್ನು ಸಾಯಿಸಿ, ಶವವನ್ನು ಬಾವಿಗೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಪ್ರಕರಣದ ಅಪರಾಧಿಗೆ ಪುತ್ತೂರಿಗೆ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೆ ಇನ್ನೆರಡು ಪ್ರಕರಣದಲ್ಲಿ ಪ್ರತ್ಯೇಕ ಶಿಕ್ಷೆ ವಿಧಿಸಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಅವರು ತೀರ್ಪು ಪ್ರಕಟಿಸಿದ್ದಾರೆ.
ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಸುರೇಶ್ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿ. ಭಾರತೀಯ ಅಪರಾಧ ದಂಡ ಸಂಹಿತೆಯ ಸೆಕ್ಷನ್ 302ರಂತೆ ಕೊಲೆ ಪ್ರಕರಣ ಸಾಬೀತಾಗಿದ್ದು, ಇದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸೆಕ್ಷನ್ 498ರಂತೆ ದೈಹಿಕ, ಮಾನಸಿಕ, ಕಿರುಕುಳ ನೀಡಿದ ಅಪರಾಧ ಸಾಬೀತಾಗಿದ್ದು, ಇದಕ್ಕೆ ಮೂರು ವರ್ಷ ಶಿಕ್ಷೆ ಮತ್ತು ಮೂರು ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ ಸೆಕ್ಷನ್ 201ರಲ್ಲಿ ಸಾಕ್ಷ ನಾಶ ಮಾಡಿದ ಆಪಾದನೆ ಸಾಬೀತಾಗಿದೆ. ಇದಕ್ಕೆ ಏಳು ವರ್ಷ ಶಿಕ್ಷೆ, ಮೂರು ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ವಿಧಿಸಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ಜೀವಾವಧಿ ಶಿಕ್ಷೆ ಆಗಿರುವ ಕಾರಣ ಇಲ್ಲಿಯವರೆಗೆ ಆರೋಪಿ ಜೈಲಿನಲ್ಲಿ ಕಳೆದಿರುವ ಅವಧಿಯಲ್ಲಿ ಪರಿಗಣಿಸದೇ ಇರಲು ತೀರ್ಪಿನಲ್ಲಿ ಸೂಚನೆ ನೀಡಲಾಗಿದೆ.
ಪ್ರಕರಣದ ವಿವರ
ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಸುರೇಶ್ ಎಂಬ ವ್ಯಕ್ತಿ ತನ್ನ ಪತ್ನಿ ಲಕ್ಷ್ಮೀ ಎಂಬವರನ್ನು ಕೊಲೆ ಮಾಡಿದ ಪ್ರಕರಣ ಇದು. ಈಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದರೂ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎಂದು ಸಂಶಯ ವ್ಯಕ್ತವಾದ ಕಾರಣ ವಿಚಾರಣೆ ನಡೆಸಲಾಗಿತ್ತು.
ಪ್ರಕರಣ ನಡೆಯುವ 9 ವರ್ಷಗಳ ಹಿಂದೆ ಸುರೇಶ್ ಮತ್ತು ಲಕ್ಷ್ಮೀ ಮದುವೆಯಾಗಿತ್ತು. ಲಕ್ಷ್ಮೀ ಅವರು ಮೂಲತಃ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ನಿವಾಸಿ. ಮದುವೆಯಾದ ಲಾಗಾಯ್ತಿನಿಂದಲೂ ಆಗಾಗ ಸುರೇಶ್ ಪತ್ನಿಗೆ ಕಿರುಕುಳ, ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರ ತಾರಕ ಸ್ವರೂಪ 2014ರ ನ.10ರಂದು ನಡೆದಿತ್ತು. ಅಂದು ರಾತ್ರಿ ಗಂಟೆ 9.30ಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು.
ಪತ್ನಿ ಮಾಡಿದ ಪದಾರ್ಥ ಚೆನ್ನಾಗಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಸುರೇಶ್ ಊಟದ ಸಂದರ್ಭ ಪತ್ನಿ ಜತೆ ಜಗಳವಾಡಿದ್ದ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆರೋಪಿಯು ತಾನು ಕೂತಿದ್ದ ಮಣೆಯನ್ನೇ ಎತ್ತಿಕೊಂಡು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಆಗ ಲಕ್ಷ್ಮೀಯು ಗಂಡನ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಆರೋಪಿಯು ಪತ್ನಿಯನ್ನು ಬೆನ್ನಟ್ಟಿದ್ದ.
ಆಕೆ ಮನೆಯಿಂದ ಇಳಿದು ಓಡಿದ್ದರು. ಸುರೇಶ್ ಹಿಂಬಾಲಿಸಿದ್ದ. ಸ್ಥಳೀಯ ಅಣಿಯೂರು ಯಾನೆ ತನಿಯಾರು ಎಂಬವರ ಜಮೀನಿಗೆ ತಲುಪಿದಾಗ ಪತ್ನಿಯನ್ನು ನಿಲ್ಲಿಸಿ ಹಲ್ಲೆ ನಡೆಸಿದ್ದ. ಅಲ್ಲೇ ಲಕ್ಷ್ಮೀ ಮೃತಪಟ್ಟಿದ್ದರು. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸುರೇಶ್ ತನ್ನ ಪತ್ನಿ ಶವವನ್ನು ಪಕ್ಕದಲ್ಲಿದ್ದ ಬಾವಿಗೆ ಹಾಕಿದ್ದಾಗಿ ಆಪಾದಿಸಲಾಗಿದೆ. ಮರುದಿನ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುರೇಶ್ ಸುದ್ದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಶವ ಬಾವಿಯಲ್ಲಿ ಸಿಕ್ಕಿತ್ತು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅದೇ ದಿನ ಕಡಬ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ದೇರಳಕಟ್ಟೆ ಫೊರೆನ್ಸಿಕ್ ಲ್ಯಾಬ್ ನಲ್ಲಿ ಮರಣೋತ್ತರ ಶವ ಪರೀಕ್ಷೆಯ ಅಧ್ಯಯನ ನಡೆದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಮೃತ ಲಕ್ಷ್ಮೀಯವರ ತಲೆ ಭಾಗಕ್ಕೆ ಬಲವಾದ ಹಲ್ಲೆ ನಡೆದಿರುವ ವಿಚಾರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು.
2014ರ ನ.13ರಂದು ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ವರದಿ ಬಂದಿತ್ತು. ಇದೇ ಅಂಶ ಮುಂದಿಟ್ಟು ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದ ಮಂಡನೆ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಇದೊಂದು ಕೊಲೆ ಪ್ರಕರಣ ಎಂದು ತೀರ್ಪು ನೀಡಿದೆ.