ಕಾಸರಗೋಡು: ಮಾಂಸ ದಂಗಡಿಯಲ್ಲಿ ಕಾರ್ಮಿಕನೋರ್ವ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ಮೂಲತಃ ಮೈಸೂರು ನಿವಾಸಿ, ಪ್ರಸ್ತುತ ಚೆಂಗಳದಲ್ಲಿ ವಾಸಿಸುತ್ತಿರುವ ದಾವೂದ್(33) ಎಂದು ಗುರುತಿಸಲಾಗಿದೆ. ಇವರು ನಾಯಮ್ಮಾರಮೂಲೆ ಮಾಂಸ ಮಾರಾಟ ಸ್ಟಾಲ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಇಂದು ಬೆಳಿಗ್ಗೆ ಅವರು ಅದೇ ಸ್ಟಾಲ್ನಲ್ಲಿ ನೈಲಾನ್ ಹಗ್ಗದಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
2004ರಲ್ಲಿ ಮೈಸೂರಿನಿಂದ ಕಾಸರಗೋಡಿಗೆ ಬಂದಿದ್ದ ದಾವೂದ್ ಬಳಿಕ ಚೆಂಗಳ ಪೊಡಿಪ್ಪಳ್ಳ ಬಂಬ್ರಾಣಿ ರಸ್ತೆ ಬಳಿಯ ಅಬ್ದುಲ್ ಲತೀಫ್ರ ಪುತ್ರಿ ಸೈನಾ ಎಂಬಾಕೆಯನ್ನು ವಿವಾಹವಾಗಿ ಆಕೆಯ ಮನೆಯಲ್ಲೇ ವಾಸಿಸುತ್ತಿದ್ದರು. ಈ ದಂಪತಿಗೆ ಶಾನಿ ಸಬಾನ, ಮೊಹಮ್ಮದ್ ಶಿಹಾನ್ ಎಂಬೀ ಮಕ್ಕಳಿದ್ದಾರೆ. ದಾವೂದ್ ಮದ್ಯ ಸೇವಿಸುತ್ತಿದ್ದು, ಅದನ್ನು ಮನೆಯವರು ಪ್ರಶ್ನಿಸಿದ್ದರೆನ್ನಲಾಗಿದೆ. ಆ ದ್ವೇಷದಿಂದ ದಾವೂರು ಕಳೆದ ಒಂದು ವಾರದಿಂದ ಮನೆಗೆ ಹೋಗದೆ ಮಾಂಸದಂಗಡಿಯಲ್ಲೇ ವಾಸಿಸುತ್ತಿದ್ದರೆಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ದಾವೂ ದ್ನ ಪತ್ನಿಯ ತಂದೆ ತಿಳಿಸಿದ್ದಾರೆ. ಪೊಲೀಸರು ಈಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ . ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.