ಕಾಸರಗೋಡು: ಮದ್ರಸ ಶಿಕ್ಷಕ ರಿಯಾಜ್ ಕೊಲೆ ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆ ತರಬೇಕು, ಎಲ್ಲಾ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣ ವಿಚಾರಣೆಗೆ ವಿಶೇಷ ಪ್ರಾಷಿಕ್ಯೂಟರನ್ನು ನೇಮಿಸಬೇಕು, ಕಾಸರಗೋಡಿನಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಸರಗೋಡು ಯುವಜನ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.
ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಮೂರು ಗಂಟೆ ತನಕ ನಡೆದ ಧರಣಿಯಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಕೋಮುವಾದಿ ಶಕ್ತಿಗಳು ಬೇರೂರಲು ಪ್ರಯತ್ನಿಸುತ್ತಿದ್ದು ಇಂತಹ ಶಕ್ತಿಗಳನ್ನು ಕಿತ್ತೊಗೆಯಬೇಕು, ಗುಜಾರಾತ್ ನಲ್ಲಿ ನಡೆಸಿದ ಕೋಮುಗಲಭೆಯನ್ನು ಕಾಸರಗೋಡು ಮೂಲಕ ಕೇರಳದಲ್ಲೂ ಸೃಷ್ಟಿಸಿ ಕೋಮು ಧ್ರುವೀಕರಣಕ್ಕೆ ಸಂಘ ಪರಿವಾರ ಹುನ್ನಾರ ನಡೆಯುತ್ತಿದೆ ಎಂದು ಧರಣಿಯನ್ನು ಉದ್ಘಾಟಿಸಿದ ಪಿಡಿಪಿ ರಾಜ್ಯ ಮಾಜಿ ಕಾರ್ಯಾಧ್ಯಕ್ಷ ಸಿ. ಕೆ ಅಬ್ದುಲ್ ಅಝೀಜ್ ಅಭಿಪ್ರಾಯಪಟ್ಟರು.
ಯುವಜನ ಒಕ್ಕೊಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಬಾಂಗೋಡ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಮಾಜಿ ಶಾಸಕ ಸಿ. ಎಚ್ ಕುಞoಬು, ಕರೀಂ ಚಂದೇರ, ಸ್ವಾಮಿ ವರ್ಕಲ ರಾಜ್, ಎ. ಬಿ ಬಾಲಕೃಷ್ಣನ್, ಎ.ಕೆ. ಎಂ ಅಶ್ರಫ್, ಕೆ.ಮಣಿಕಂಠನ್, ರಿಯಾಜ್ ಫರಂಗಿಪೇಟೆ, ವಿನೋದ್, ನೌಫಾಲ್ ಉಳಿಯತ್ತಡ್ಕ, ಯೂಸಫ್, ವಿ. ವಿ ಪ್ರಭಾಕರನ್, ಅಶ್ರಫ್ ಬಾಯಾರ್, ಝುಬೈರ್ ಪೆಡುಪ್ಪು ಮೊದಲಾದವರು ಉಪಸ್ಥಿತರಿದ್ದರು.