ಕಾಸರಗೋಡು: ಕೇರಳ ಸರಕಾರದ ಮಲಯಾಳ ಕಡ್ಡಾಯ ಆದೇಶವನ್ನು ಪ್ರತಿಭಟಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಉಪ್ಪಳ ನಯಾಬಜಾರ್ನಲ್ಲಿರುವ ಮಂಜೇಶ್ವರ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಸತ್ಯಾಗ್ರಹದಲ್ಲಿ ಅಧ್ಯಾಪಕರು, ಕನ್ನಡ ಪರ ಸಂಘಟನೆ ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಸತ್ಯಾಗ್ರಹವನ್ನು ಗೋಪಾಲ ಶೆಟ್ಟಿ ಅರಿಬೈಲ್ ಉದ್ಘಾಟಿಸಿದರು. ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಟಿ.ಡಿ ಸದಾಶಿವ ರಾವ್, ಸತ್ಯನಾರಾಯಣ ಭಟ್, ಚಂದ್ರಹಾಸ, ಎಂ.ಜಿ ನಾರಾಯಣ ರಾವ್, ಅಶೋಕ್ ಕೊಡ್ಲಮೊಗರು ಮೊದಲಾದವರು ನೇತೃತ್ವ ನೀಡಿದರು. ಬದಿಯಡ್ಕದಲ್ಲಿರುವ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲೂ ಧರಣಿ ನಡೆಸಲಾಯಿತು.
ಮೇ ಒಂದರಿಂದ ಕೇರಳದಲ್ಲಿ ಮಲಯಾಳ ಭಾಷೆಯನ್ನು ಕಡ್ಡಾಯ ಗೊಳಿಸಿದ್ದು, ಭಾಷಾ ಅಲ್ಪಸಂಖ್ಯಾತ ಕಾಸರಗೋಡಿಗೆ ವಿನಾಯಿತಿ ನೀಡುವಂತೆ ಕನ್ನಡ ಪರ ಸಂಘಟನೆಗೆಳು ಪ್ರತಿಭಟನೆಗೆ ಮುಂದಾಗಿವೆ.