ಕಾರ್ಕಳ: ಕಾಂತಾವರ ಸುರೇಖಾ ಪೂಜಾರಿ ಸಾವಿಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಆಂತೋನಿ ನೇತೃತ್ವದ ಪೋಲೀಸರ ತಂಡ ಬಂಧಿಸಿದ್ದಾರೆ. ಶ್ರೀ ರಾಮ ಸೇನೆ ಪ್ರಮುಖ ಕಾರ್ಯಕರ್ತ ರೋಶನ್ ಕೋಟ್ಯಾನ್ ಇರ್ವತ್ತೂರು, ಪತಿಯ ಇಬ್ಬರು ಸಹೋದರರ ಪತ್ನಿಗಳಾದ ಭಾರತಿ ಹಾಗೂ ಶೋಭಾ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ:ರೋಶನ್ ಕೋಟ್ಯಾನ್
ಯಾರಿಕೆ ಸುರೇಖಾ?:
ಮೂಡಬಿದ್ರಿ ಕೋಟೆಬಾಗಿಲು ಪ್ರಾಂತ್ಯ ನಿವಾಸಿ ಕೋಟೆಬಾಗಿಲಿನ ಸಂಜೀವ ಸುವರ್ಣ ಎಂಬವರ ಮಗಳು ಸುರೇಖಾ(28) ಎಂಬಾಕೆ ಘಟನೆಯಲ್ಲಿ ಸಾವಿಗೀಡಾದವಳು. ಐದು ವರ್ಷಗಳ ಹಿಂದೆ ಕಾಂತಾವರದ ನಿವಾಸಿ ಪ್ರಕಾಶ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರಸ್ತುತ ಅವರಿಗೆ ನಾಲ್ಕು ವರ್ಷದ ಒಂದು ಗಂಡು ಮಗುವಿದೆ. ಗಂಡ ಹಾಗೂ ಅವರ ಮನೆಯವರೊಂದಿಗೆ ಕಾಂತವರದ ಪತಿಯ ಮನೆಯಲ್ಲಿ ವಾಸವಾಗಿದ್ದಳು. ಈ ನಡುವೆ ಏಪ್ರಿಲ್ 27ರ ಮಂಗಳವಾರ ಮಧ್ಯಾಹ್ನದ ಸುಮಾರು 2ರ ವೇಳೆಗೆ ಮನೆ ಸಮೀಪದ ಹಾಡಿಯಲ್ಲಿ ನೇಣುಬಿಗಿದು ಕೊಂಡಿದ್ದು ಆಕೆಯನ್ನು ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಹೋದರ ಮೂಡಬಿದ್ರಿ ಕೋಟೆಬಾಗಿಲು ನಿವಾಸಿ ಸುರೇಶ ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತನಿಖೆ ಚುರುಕು..
ಇನ್ನೊಂದು ಮೂಲಗಳ ಪ್ರಕಾರ ಸುರೇಖಾ ಸಾವಿನ ಹಿಂದೆ ಪತಿ ಮನೆಯವರ ಹೆಸರು ಕೇಳಿಬರುತ್ತಿದೆ. ಸುರೇಖಾರ ಪತಿ ಪ್ರಕಾಶ್ ಮಂಗಳೂರಿನಲ್ಲಿ ರಿಕ್ಷಾ ಶೋರೂಂನಲ್ಲಿ ಉದ್ಯೋಗಿಯಾಗಿದ್ದು ಪತಿ-ಪತ್ನಿ ಸಂಬಂಧ ಅನೋನ್ಯವಾಗಿತ್ತೆನ್ನಲಾಗಿದೆ. ಆದರೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಸುರೇಖಾಳ ಗಂಡನ ಸಹೋದರರ ಪತ್ನಿಯಂದಿರಾದ ಶೋಭಾ ಹಾಗೂ ಭಾರತಿಯವರ ಉದ್ಧಟತನದ ನಡವಳಿಕೆ ಸುರೇಖಾಳ ಬದುಕನ್ನೆ ಹಾಳು ಮಾಡಿದೆ ಎಂಬ ಗಂಭೀರ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಅನೈತಿಕ ವ್ಯವಹಾರ ಕಣ್ಣಾರೆ ಕಂಡಾಗ..
ಪತಿಯ ಮನೆಯಲ್ಲಿ ನಡೆದ ಅಕ್ರಮ ಸಂಬಂಧ ಮೃತ ಸುರೇಖಾ ಕಣ್ಣಾರೆ ಕಂಡಿದ್ದು, ಈ ವಿಚಾರ ಆರೋಪಿ ರೋಶನ್ ಕೋಟ್ಯಾನ್ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಖಾ ತನ್ನ ಗಂಡನಲ್ಲೂ ವಿಚಾರ ತಿಳಿಸಿದ್ದು, ಈ ಎಲ್ಲಾ ಬೆಳವಣಿಗೆಯ ಬಳಿಕ ಸುರೇಖಾಳ ಮೊಬೈಲ್ ಆರೋಪಿ ರೋಶನ್ ಕೋಟ್ಯಾನ್ ಆಗ್ಗಿಂದಾಗೆ ಬೆದರಿಕೆ ಕರೆಯೊಡ್ಡುತ್ತಿದ್ದನು. ಅನೈತಿಕ ವಿಚಾರವನ್ನು ಬಹಿರಂಗ ಪಡಿಸಿದಲ್ಲಿ ಗಂಡ, ಮಗು ಸಹಿತ ಮೂವರನ್ನು ಕೊಲೆ ನಡೆಸುವುದಾಗಿ ಜೀವ ಬೆದರಿಕೆಯೊಡ್ಡುತ್ತಿದ್ದನು ಎಂದು ತಿಳಿದುಬಂದಿದೆ. ಇದೇ ವಿಚಾರವನ್ನು ಆಕೆ ಜೀವಿತಾವಧೀಯಲ್ಲಿ ಬರೆದಿರುವ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ. ಮಾತ್ರವಲ್ಲದೇ ಆಕೆಯ ಮೊಬೈಲ್ ಧ್ವನಿ ಮುದ್ರಣದಲ್ಲಿ ದಾಖಲಾಗಿದ್ದು ತನಿಖೆಗೆ ಪೂರಕವಾಗುವಂತೆ ಮೊಬೈಲ್ ಸೆಟ್ ಅನ್ನು ಪೊಲೀಸರು ವಶಪಡಿಸಿದ್ದಾರೆ.
ಯಾರಿತ ಖಳನಾಯಕ:
ವೃತ್ತಿಯಲ್ಲಿ ಮೊಬೈಲ್ ಸಿಮ್ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದನಲ್ಲದೇ ತನ್ನ ಕುಕೃತ್ಯ ರಕ್ಷಣೆಗಾಗಿ ಶ್ರೀರಾಮ ಸೇನೆಯಲ್ಲಿ ಗುರುತಿಸಿಕೊಂಡಿದ್ದನು.