ಸುಳ್ಯ: ನಗರ ಮಧ್ಯೆ ಕಟ್ಟಡದ ಮೇಲ್ಭಾಗದಲ್ಲಿರುವ ಮೊಬೈಲ್ ಟವರಿನ ಬುಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕಾರಣ ಸುಳ್ಯ ನಗರದಲ್ಲಿ ಕೆಲ ಕಾಲ ಆತಂಕ ಸೃಷ್ಠಿಯಾದ ಘಟನೆ ಗುರುವಾರ ಸಂಜೆ ನಡೆಯಿತು.
ಸುಳ್ಯ ನಗರದ ಶ್ರೀರಾಂ ಪೇಟೆಯ ಕಟ್ಟಡವೊಂದರ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಖಾಸಗೀ ಕಂಪೆನಿಯ ಮೊಬೈಲ್ ಟವರ್ ನ ನಿಯಂತ್ರಕ ಪೆಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರದೇಶದೆಲ್ಲೆಡೆ ಕ್ಷಣ ಮಾತ್ರದಲ್ಲಿ ಹೊಗೆ ಹರಡಿ ಬೆಂಕಿ ಹತ್ತಿಕೊಂಡಿತು. ಧಗ ಧಗ ಉರಿದ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಏರಿತು. ಇದರಿಂದ ನಗರದಲ್ಲಿ ಕೆಲ ಕಾಲ ಆತಂಕ ಸೃಷ್ಠಿಯಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು. ಕಟ್ಟಡದ ಮೂರನೇ ಮಹಡಿಯ ಮೇಲೆ ಪೈಪ್ಗಳನ್ನು ಕೊಂಡೊಯ್ದು ನೀರು ಚಿಮ್ಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಮೊಬೈಲ್ ಟವರ್ ನ ಬ್ಯಾಟರಿ ಮತ್ತಿತರ ನಿಯಂತ್ರಣ ಘಟಕಕ್ಕೆ ಹಾನಿ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ ಎಸ್ಐ ಚಂದ್ರಶೇಖರ್ ಹೆಚ್.ವಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.