ಕಾಸರಗೋಡು: ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯನ್ನು ವಿರೋಧಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಸತ್ಯಾಗ್ರಹ ಉದ್ಘಾಟಿಸಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷೆ ಪ್ರಭಾವತಿ ಪುಂಡೂರು ಅಧ್ಯಕ್ಷತೆ ವಹಿಸಿದರು. ಕನ್ನಡ ಮಾಧ್ಯಮ ಸಂಘದ ಪೂರ್ವಾಧ್ಯಕ್ಷ ಸತೀಶ್ ಕೆ., ರಾಮರಾಜ ಕ್ಷತ್ರೀಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ, ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್, ಗಮಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಶಂಕರನಾರಾಯಣ ಭಟ್, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಸದಸ್ಯ ಉಮೇಶ ಸಾಲಿಯಾನ್, ಜಿ.ಪಂ. ಸದಸ್ಯ ಅಡ್ವಾ. ಶ್ರೀಕಾಂತ್, ಶಿಕ್ಷಣ ತಜ್ಞರು, ಸಿರಿಗನ್ನಡ ವೇದಿಕೆ ಅಧ್ಯಕ್ಷ ವಿ.ಬಿ.ಕುಳಮರ್ವ, ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಮಾಸ್ತರ್, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು, ಎಣ್ಮಕಜೆ ಗ್ರಾ.ಪಂ. ಸದಸ್ಯೆ ಎ.ಎ.ಆಯಿಷಾ ಪೆರ್ಲ, ಚಂದ್ರಹಾಸ ಪಿ., ಪ್ರಶಾಂತ್ ಹೊಳ್ಳ, ಗುರುಪ್ರಸಾದ್ ಕೋಟೆಕಣಿ, ಅಧ್ಯಾಪಕ ಸಂಘದ ಅಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಮೊದಲಾದವರು ಮಾತನಾಡಿದರು.
ಆರಂಭದಲ್ಲಿ ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು, ಬಾಬು ಮಾಸ್ತರ್ ಕಾರ್ಯಕ್ರಮ ನಿರೂಪಿಸಿ, ನವೀನ್ ಕುಮಾರ್ ಪಿ. ವಂದಿಸಿದರು.