News Kannada
Saturday, October 01 2022

ಕರಾವಳಿ

ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ಕೊಲೆ ಪ್ರಕರಣ:ಆರೋಪಿಗಳು ಖುಲಾಸೆ - 1 min read

Photo Credit :

ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ಕೊಲೆ ಪ್ರಕರಣ:ಆರೋಪಿಗಳು ಖುಲಾಸೆ

ಪುತ್ತೂರು: ತಣ್ಣೀರುಪಂಥ ನಿವಾಸಿಯಾಗಿದ್ದ ಮೊಟ್ಟೆತಡ್ಕದ ಖತೀಜಮ್ಮ ಅವರನ್ನು ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದ ಮೃತರ ಸಹೋದರನ ಪತ್ನಿ ಸಹಿತ ಮೂವರನ್ನೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಗುಳುಂಬು ವಜ್ಹಮ್ಮದ್ ಕುಂಞಿ ಅವರ ಮಗ ಎ.ಎಂ.ಅಬ್ದುಲ್ ಅಜೀಝ್ ಯಾನೆ ಅಜೀಝ್ (24ವ.), ಆತನ ಸಹೋದರಿಯರಾದ  ಆಯಿಷತ್ ಅಝಿದಾ ಯಾನೆ ಅಸೀದಾ ಕಲ್ಮಡ್ಕ ಹಾಗೂ ಅಸ್ಪಾನಾ ಮೊಟ್ಟೆತಡ್ಕ ವಿಚಾರಣೆ ಎದುರಿಸುತ್ತಿದ್ದ ಆರೋಪಿಗಳಾಗಿದ್ದು ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ.
ಆರೋಪಿ ಅಸ್ಪಾನಾರವರು ಮೃತ ಖತೀಜಮ್ಮರವರ ಸಹೋದರ ಇಸಾಕ್ ರವರ ಪತ್ನಿಯಾಗಿದ್ದರಿಂದ ಅದೇ ಸಂಬಂಧದ ಹಿನ್ನಲೆಯಲ್ಲಿ ಆರೋಪಿಗಳು 2012ರ ಜ.9ರಂದು ಖತೀಜಮ್ಮ ಅವರ ಮನೆಗೆ ನೆಂಟರಾಗಿ ಹೋಗಿ ಕೃತ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿ ಅಬ್ದುಲ್ ಅಜೀಜ್ ಹಣದ ಅಡಚಣೆ ಎದುರಿಸುತ್ತಿದ್ದು ಅದಕ್ಕಾಗಿ ಖತೀಜಮ್ಮರವರಲ್ಲಿದ್ದ ಚಿನ್ನಾಭರಣವನ್ನು ದೋಚಲೆಂದು ಈ ಕೃತ್ಯ ಎಸಗಿದ್ದ ಎಂದು ಆಗಿನ ಎಎಸ್ಪಿ ಎಂ.ಎನ್.ಅನುಚೇತ್ ತಿಳಿಸಿದ್ದರು.

ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ಮಹಮ್ಮದ್ ಎಂಬವರ ಮಗಳು ಖತೀಜಮ್ಮ ಅವರನ್ನು ಬೆಳ್ತಂಗಡಿ ತಣ್ಣೀರುಪಂಥದ ಅಬ್ಬಾಸ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಅಬ್ಬಾಸ್ ರವರು ಕೂಲಿ ಕೆಲಸಕ್ಕೆ ಹೋಗಿದ್ದು, ಅವರ ಮಕ್ಕಳಿಬ್ಬರು ಶಾಲೆಗೆ ಹೋಗಿದ್ದರು. ಖತೀಜಮ್ಮ ಮನೆಯಲ್ಲಿ ಓರ್ವರೇ ಇರುವುದನ್ನು ಖಚಿತಪಡಿಸಿಕೊಂಡಿದ್ದ ಆರೋಪಿಗಳು ಆಕೆಯ ಮನೆಗೆ ನೆಂಟರಾಗಿ ಹೋಗಿದ್ದರು. ಮಾರುತಿ ಒಮ್ನಿಯಲ್ಲಿ (ಕೆಎ21-ಎನ್.1469)ಹೋಗಿದ್ದ ಆರೋಪಿಗಳು ಒಮ್ನಿಯನ್ನು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿ ಬಳಿಕ ಮನೆಗೆ ಹೋಗಿದ್ದರು. ಮನೆಗೆ ಅತಿಥಿಗಳಾಗಿ ಬಂದಿದ್ದವರ ಯೋಗಕ್ಷೇಮ ವಿಚಾರಿಸಿದ್ದ ಖತೀಜಮ್ಮ ಬಳಿಕ ಅವರಿಗೆ ಚಹಾ ಮಾಡಿ ತರಲೆಂದು ಅಡುಗೆ ಕೋಣೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅಸ್ಪಾನಾ ಮತ್ತು ಆಯಿಷತ್ ಅಜಿದಾರವರೂ ಆಕೆಯ ಜತೆಗೆ ಅಡುಗೆ ಕೋಣೆಗೆ ಹೋಗಿದ್ದರು. ಹೊರಗಡೆ ಕುಳಿತಿದ್ದ ಅಬ್ದುಲ್ ಅಜೀಝ್ ಈ ಸಂದರ್ಭದಲ್ಲಿ, ಅಲ್ಲೇ ಇದ್ದ ಬೆಡ್ರೂಂ ಪಕ್ಕದ ಕಪಾಟಿನ ಬಾಗಿಲು ತೆಗೆದು ಚಿನ್ನಾಭರಣಕ್ಕಾಗಿ ಹುಡುಕಾಡಲಾರಂಭಿಸಿದ್ದರು. ಆತನಿಗೆ ಚಹಾ ನೀಡಲೆಂದು ಅಡುಗೆ ಕೋಣೆಯಿಂದ ಖತೀಜಮ್ಮ ಹೊರಗಡೆ ಬಂದಾಗ, ಅಝೀಝ್ ರವರು ಕಪಾಟಿನಲ್ಲಿ ಚಿನ್ನಾಭರಣ ಹುಡುಕುತ್ತಿದ್ದುದನ್ನು ಗಮನಿಸಿದ್ದ ಖತೀಜಮ್ಮ ‘ಏನು ಮಾಡುತ್ತಿದ್ದಿ’ ಎಂದು ಅಝೀಝ್ ರಲ್ಲಿ ಏರು ಧ್ವನಿಯಲ್ಲಿ ವಿಚಾರಿಸಿದ್ದರು. ಇನ್ನು ಈಕೆಯನ್ನು ಸುಮ್ಮನೆ ಬಿಟ್ಟರೆ ತಮಗೆ ತೊಂದರೆ ತಪ್ಪಿದ್ದಲ್ಲ ಎಂದು ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಅಲ್ಲಿಯೇ ಕೊಲೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಖತೀಜಮ್ಮ ಅವರನ್ನು ಕೊಲೆಗೈದು ಶವವನ್ನು ಒಮ್ನಿಯ ಒಳಗೆ ಇರಿಸಿದ್ದ ಬಳಿಕವೂ ಆರೋಪಿಗಳು ಮನೆಗೆ ಬಂದು ಚಿನ್ನಾಭರಣಕ್ಕಾಗಿ ಹುಡುಕಾಡಿ ಸಿಗದೇ ಇದ್ದುದರಿಂದ ಖತೀಜಮ್ಮ ಅವರ ಮೈಮೇಲಿದ್ದ ರೋಲ್ಡ್ ಗೋಲ್ಡ್ ಆಭರಣ ಕೊಂಡೊಯ್ದಿದ್ದರು ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ನೆರವಾಗಿದ್ದ ಮೊಬೈಲ್ ಕರೆ: ಕೂಲಿ ಕೆಲಸಕ್ಕೆ ಹೋಗಿದ್ದ ಪತಿ ಅಬ್ಬಾಸ್ ಮನೆಗೆ ಬಂದಾಗ ಖತೀಜಮ್ಮ ಅವರು ಮನೆಯಲ್ಲಿರಲಿಲ್ಲ. ಸಂಬಂಧಿಕರೆಲ್ಲಾ ವಿಚಾರಿಸಿದ ಬಳಿಕ ಅವರು ಪತ್ನಿ ನಾಪತ್ತೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಡುತ್ತಿದ್ದಂತೆಯೇ ಅಮೈತಡ್ಕದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು.

See also  ಅಕ್ರಮ ಮರಳು ಸಾಗಾಟಕ್ಕೆ ರೈಲುಮಾರ್ಗದ ಬಳಕೆ: ಬೆಚ್ಚಿಬಿದ್ದ ಪೊಲೀಸ್ ಇಲಾಖೆ

ಶವ ಮೋರಿಯೊಳಗೆ ಪತ್ತೆ: ಕೊಲೆಗೈದ ಬಳಿಕ ಮಾರುತಿ ಒಮ್ನಿಯನ್ನು ಅಂಗಳಕ್ಕೆ ತಂದು ಖತೀಜಮ್ಮ ಅವರ ಶವದ ಕೈಕಾಲುಗಳನ್ನು ಕಟ್ಟಿ ಎಲ್ಲರೂ ಸೇರಿ ಶವವನ್ನು ಒಮ್ನಿಯಲ್ಲಿ ಇರಿಸಿದ ಬಳಿಕವೂ ಆರೋಪಿಗಳು ಮನೆಯಲ್ಲಿ ಚಿನ್ನಾಭರಣಕ್ಕಾಗಿ ಹುಡುಕಾಡಿದ್ದರು. ಬಳಿಕ ಅದೇ ಒಮ್ನಿಯಲ್ಲಿ ಆರೋಪಿತರ್ಯಾರೂ ತೆರಳಿದ್ದರು. ಅಜ್ಜಾವರದಲ್ಲಿ ಸಹೋದರಿಯರನ್ನು ಇಳಿಸಿದ ಅಬ್ದುಲ್ ಅಜೀಜ್ ಶವದೊಂದಿಗೆ ಮತ್ತೆ ಒಮ್ನಿಯಲ್ಲಿ ಬಂದು ಸುಬ್ರಹ್ಮಣ್ಯ ಮಾರ್ಗವಾಗಿ ಕೈಕಂಬ  ಬಿಳಿನೆಲೆಗೆ ಬಂದು ಗುಂಡ್ಯ -ಸುಬ್ರಹ್ಮಣ್ಯ ಸಾರ್ವಜನಿಕ ರಸ್ತೆ ಮಧ್ಯೆ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿರುವ ಮೋರಿಯೊಂದರೊಳಗೆ ಶವವನ್ನು ಎಸೆದು ಹೋಗಿ ಬೆಂಗಳೂರಿಗೆ ಹೋಗಿ ತಲೆಮರೆಸಿಕೊಂಡಿದ್ದರೆನ್ನಲಾಗಿತ್ತು.
ಶವ ಖತೀಜಮ್ಮ ಅವರದ್ದೇ ಎಂದು ಖಚಿತವಾದ ಬಳಿಕ ಕಡಬ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಲು ಹೊರಟ ಪೊಲೀಸರಿಗೆ ಖತೀಜಮ್ಮ ಅವರ ಮನೆಯಲ್ಲಿ ದೊರೆತಿದ್ದ ಮೊಬೈಲ್ ನಂಬ್ರವೊಂದು ಪ್ರಕರಣವನ್ನು ಭೇದಿಸಲು ಮಹತ್ವದ ಸುಳಿವು ನೀಡಿತ್ತು. ನಾಪತ್ತೆಯಾಗಿದ್ದ ಖತೀಜಮ್ಮ ಅವರ ಮನೆಯಲ್ಲಿ ಗ್ಲಾಸ್ ಗಳಲ್ಲಿ ಚಹಾ ಮತ್ತು ತಟ್ಟೆಯಲ್ಲಿ ಬಿಸ್ಕತ್ತುಗಳನ್ನು ನೀಡಿರುವುದು ಪತ್ತೆಯಾಗಿದ್ದರಿಂದ ಆರಂಭದಲ್ಲಿಯೇ, ಇದು ತೀರಾ ಹತ್ತಿರದವರಿಂದಲೇ ಆದ ಕೃತ್ಯ ಎನ್ನುವುದರ ಸುಳಿವು ನೀಡಿತ್ತು. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾರಂಭಿಸಿ, ಖತೀಜಮ್ಮ ಅವರ ಮೊಬೈಲ್ ಗೆ  ಬಂದಿದ್ದ ಕರೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅದರಲ್ಲಿ ದಾಖಲಾದ, ಜ.7 ಮತ್ತು 9ರಂದು ಖತೀಜಮ್ಮ ಅವರಿಗೆ ಕರೆ ಮಾಡಿದ್ದ ನಂಬ್ ವೊಂದರ ಬಗ್ಗೆ ಪೊಲೀಸರ ಗಮನ ಹೋಗಿತ್ತು. ಖತೀಜಮ್ಮ ಅವರಿಗೆ ಕರೆ ಹೋಗಿದ್ದ ಇದೇ ನಂಬರ್ ನಿಂದ ಆಕೆಯ ನಾಪತ್ತೆ ಬಳಿಕ ಅಸ್ಪಾನಾ ಅವರಿಗೆ ನಿರಂತರವಾಗಿ ಕರೆ ಹೋಗಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ತನಿಖೆಯನ್ನು ಕೇಂದ್ರೀಕರಿಸಿದ ಪೊಲೀಸರು ಅಸ್ಪಾನಾಳನ್ನು ವಿಚಾರಣೆಗೊಳಪಡಿಸಿದರು.

ಈ ನಂಬರ್ ಅಬ್ದುಲ್ ಅಝೀಜ್ ರವರದ್ದು ಎನ್ನುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು. ಇದೇ ವೇಳೆಗೆ ಖತೀಜಮ್ಮ ನಾಪತ್ತೆಯಾದ ದಿನ ಅವರ ಮನೆಯ ಬಳಿಗೆ ಬಂದಿದ್ದ ಮಾರುತಿ ಒಮ್ನಿ ಅಬ್ದುಲ್ ಅಜೀಝ್ ರವರದ್ದು ಎಂದು ಪೊಲೀಸರಿಗೆ ಮಾಹಿತಿ ದೊರೆಯಿತು. ಅಬ್ದುಲ್ ಅಝೀಜ್ ನ ಪೂರ್ವಪರಗಳ ಬಗ್ಗೆ ಇಲಾಖೆಯವರು ಮಾಹಿತಿ ಪಡೆದುಕೊಂಡು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮೂವರು ಆರೋಪಿಗಳನ್ನೂ ದೋಷಮುಕ್ತಗೊಳಿಸಿ ಏ.27ರಂದು ತೀರ್ಪು ನೀಡಿದೆ.ಆರೋಪಿಗಳ ಪರ ಸುಳ್ಯದ ವಕೀಲ ಎಂ.ವೆಂಕಪ್ಪ ಗೌಡ, ಚಂಪಾ ವಿ.ಗೌಡ, ರಾಜೇಶ್ ಬಿ.ಜೆ.ವಾದಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು