ಕಾರ್ಕಳ: ಉಡುಪಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶನಾಯಕ್ ಎಂಬವರಿಗೆ ಸೇರಿದ ಕಣಂಜಾರಿನಲ್ಲಿರುವ ಜಲ್ಲಿ ಕ್ರಶರ್ ಮತ್ತು ಕಲ್ಲುಗಣಿಗಾರಿಕೆಗೆ ಕಾರ್ಕಳ ತಹಶೀಲ್ದಾರ್ ಗುರುಪ್ರಸಾದ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಕೊದಂಡರಾಮ ಮತ್ತು ಮಹೇಶ್ವರ ರಾವ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಸರ್ವೇ ನಂಬ್ರ 169 ಕಣಂಜಾರು ಜಡ್ಡಿನಕಟ್ಟಕೆರೆಯಲ್ಲಿ 26.30 ಎಕರೆ ಪ್ರದೇಶದಲ್ಲಿ ಕರೆಯನ್ನು ಅಕ್ರಮಿಸಿಕೊಂಡು ಮಣ್ಣುಮುಚ್ಚಿ ಜಲ್ಲಿಕ್ರಶರ್ ಹಾಗೂ ಕಲ್ಲುಗಣಿಗಾರಿಕೆ ಉದ್ಯಮ ನಡೆಸಲಾಗುತ್ತಿತ್ತು. ಇದು ಕಾನೂನು ರೀತ್ಯಾದಲ್ಲಿ ಅಪರಾಧವಾಗಿರುತ್ತದೆ ಎಂದು ಸ್ಥಳೀಯರು ಅಕ್ಷೇಪಿಸಿ ಸಂಬಂಧಿತ ಎಲ್ಲಾ ಇಲಾಖಾಧಿಕಾರಿಗಳು ಹಾಗೆ ಜನಪ್ರತಿನಿಧಿಗಳಿಗೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ದೂರು ಮತ್ತು ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳ ಕೃಪಾಪಟಾಕ್ಷದೊಂದಿಗೆ ಪರವಾನಿಗೆ ಪಡೆದುಕೊಂಡಿದ್ದು ಅದರ ಅವಧಿಯು 2016 ನವಂಬರ್ 18ಕ್ಕೆ ಮುಕ್ತಾಯಗೊಂಡಿರುತ್ತದೆ. 2016 ಮಾರ್ಚ್ 30ರಂದು ಅಂದಿನ ತಹಶೀಲ್ದಾರ್, ನೀರಾವರಿ ಇಲಾಖಾಧಿಕಾರಿ,ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ, ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ ಇವರುಗಳು ಜಂಟೀ ಸ್ಥಳ ಪರಿಶೀಲನೆ ನಡೆಸಿ 26.30 ಎಕರೆ ಪಹಣಿಯಂತೆ ಪರಂಬೋಕು ಕೆರೆ ಎಂದು ಆ ಪ್ರದೇಶವು ದಾಖಲಾಗಿರುತ್ತದೆ ಹಾಗೂ ಕಣಂಜಾರು ಜಡ್ಡಿನಕಟ್ಟಕೆರೆ ಎಂದು ಕರೆಯಲಾಗುತಿತ್ತು. . ಕಾಲಂ 11ರಲ್ಲಿ 1.95 ಎಕರೆ ಮೀಸಲು ಅರಣ್ಯ ಎಂದು ದಾಖಲಾಗಿರುತ್ತದೆ. ಪಕ್ಕದ ಜಮೀನು ಸರ್ವೇ ನಂಬ್ರ 191 ಮಿಲಿಟರಿ ದರ್ಖಾಸು ಆಗಿದ್ದು ಅದು ಮಾಜಿ ಸೈನಿಕ ದುಗ್ಗಪ್ಪ ಶೆಟ್ಟಿಗಾರ್ ಎಂಬವರ ಕುಟುಂಬಕ್ಕೆ ಸೇರಿದಾಗಿದೆ. ಮಾತ್ರವಲ್ಲದೇ ಜನವಸತಿ ಪ್ರದೇಶವಾಗಿ ಗುರುತಿಸಿದ್ದು ಅಲ್ಲಿ ದಲಿತ ಸಮುದಾಯಗಳು ಇವೆ.
10 ದಿನಗಳಲ್ಲಿ ನೀಡಲಾದ ಗಣಿಗುತ್ತಿಗೆಯ ನಿರಾಪೇಕ್ಷಣಾ ಪತ್ರ
2016 ಆಗಸ್ಟ್ 2ರಿಂದ 12ರ ತನಕ ಪ್ರಭಾರ ತಹಶೀಲ್ದಾರ್ ತಿಪ್ಪೇಸ್ವಾಮಿ ತಾಲೂಕಿನ 8 ಕ್ವಾರಿಗಳಿಗೆ ಗಣಿಗುತ್ತಿಗೆಯ ನಿರಾಪೇಕ್ಷಣಾ ಪತ್ರ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವುಗಳಲ್ಲಿ ಒಂದಾಗಿರುವ ಎಂಎಂಸಿ 28/16-17 02-08-2016 ಶ್ರೀಶನಾಯಕ್ ಎಂಬವರಿಗೆ ಕಣಂಜಾರು ಸರ್ವೇ ನಂಬ್ರರಲ್ಲಿ 3.00 ಎಕರೆ ನೀಡಲಾಗಿದೆ.
ಕಾನೂನು ಬಾಹಿರ ಚಟುವಟಿಕೆ
ನಸುಕಿನ ಜಾವ ಸುಮಾರು 4.30ರ ವೇಳೆಗೆ ಜಲ್ಲಿ ಕ್ರಶರ್ ಕಾರ್ಯರಂಭಗೊಂಡು ರಾತ್ರಿ ಸುಮಾರು 9ಗಂಟೆಯ ತನಕ ಪ್ರತಿದಿನ ಮುಂದುವರಿಯುತ್ತಿದೆ.
ಪ್ರತಿಗಂಟೆಗೊಮ್ಮೆ ಭಾರೀ ಸ್ಫೋಟಕದ ಸದ್ದುಗಳಿಂದ ಇಲ್ಲಿಂದಲೇ ಕೇಳಿಬರುತ್ತಿದೆ. ಇದು ಸ್ಥಳೀಯ ನಿವಾಸಿಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಸ್ಫೋಟದಿಂದ ಹೊರ ಸೋಸುವ ರಾಸಾಯನಿಕ ದುರ್ವಾಸನೆ ಉಸಿರಾಡುವುದಕ್ಕೂ ಕಷ್ಟಕರವಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆಗೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಶಬ್ದಮಾಲಿನ್ಯದಿಂದಾಗಿ ವೃದ್ಧಾಪ್ಯರು, ಅನಾರೋಗ್ಯ ಪೀಡಿತರ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂಬ ಆರೋಪವು ಸ್ಥಳೀಯ ನಿವಾಸಿಗಳಾದಾಗಿದೆ.
ಗ್ರಾಮ ಪಂಚಾಯತ್ ದುರಸ್ಥಿಪಡಿಸಿದ ಕರೆ
ಸರ್ವೇ ನಂಬ್ರ 169ರಲ್ಲಿ 26.30 ಎಕರೆ ಪ್ರದೇಶದ ಜಡ್ಡಿನಕಟ್ಟಕರೆಯ ಅಭಿವೃದ್ಧಿಯನ್ನು ಕೃಷಿ ಉದ್ದೇಶಕ್ಕಾಗಿ ನೀರೆಗ್ರಾಮ ಪಂಚಾಯತ್ 2003-04ನೇ ಸಾಲಿನಲ್ಲಿ ಹೂಳೆತ್ತಿ ದುರಸ್ಥಿ ಪಡಿಸಿದೆ. ಅದಕ್ಕಾಗಿ 99,900 ರೂ. ಖರ್ಚು ಭರಿಸಿರುವುದು ಕಡತ ಮೂಲಗಳಿಂದ ತಿಳಿದುಬಂದಿದೆ.
ಕೆರೆ ಉಳಿವಿಗೆ ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯ
ಕಡುಬೇಸಿಗೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ರಾಜ್ಯ ಸರಕಾರವು ಅಗತ್ಯ ಅನುದಾನಗಳು ಬಿಡುಗಡೆಗೊಳಿಸಿದೆ. ಅಂತರ್ಜಲ ಉಳಿಸುವ ಕೆರೆಗಳ ದುರಸ್ಥಿ ಕಾರ್ಯ ಇನ್ನೂ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಕೆಲ ಕೆರೆಗಳು ಯಾರ್ಯಾರೋ ಪಾಲಾಗಿದ್ದು, ಇನ್ನೂ ಕೆಲ ಕೆರೆಗಳ ಮಣ್ಣುಪಾಲಾಗಿರುವುದು ಕಂಡುಬಂದಿದೆ. ಸ್ವಾರ್ಥಕ್ಕಾಗಿ ಕೆರೆಗಳನ್ನು ಮುಚ್ಚಿ ಸಂಪತ್ತು ಕೊಳ್ಳೆ ಹೊಳೆಯುವ ನಿಟ್ಟಿನಲ್ಲಿ ಕೆಲ ಉದ್ಯಮಿಗಳು ಕೆಲ ಪಕ್ಷಗಳ ಕರಿಛಾಯೆಯಡಿ ವ್ಯವಹಾರದಲ್ಲಿ ತೊಡಗಿರುವುದು ಕಂಡುಬಂದಿದೆ.
ಪರಿಸರ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಇಲ್ಲ
ಪರಿಸರ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ರಹಿತವಾಗಿ ಈ ಕ್ವಾರೇ ನಡೆಯುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಚರಣೆ ನಡೆದಿದೆ. ಜನರೇಟರ್ನ ಕೀಲಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡುವ ಮೂಲಕ ಕ್ವಾರೇ ವ್ಯವಹಾರಕ್ಕೆ ಬ್ರೇಕ್ ಹಾಕಲಾಗಿದೆ. ಅದನ್ನು ಸ್ವಷ್ಟವಾಗಿ ಉಲ್ಲಂಘಿಸಿದೇ ಅದಲ್ಲಿ ಕ್ವಾರೇಯನ್ನೇ ಸ್ವಾಧೀನ ಪಡಿಸಲಾಗುವುದೆಂದು ತಹಶೀಲ್ದಾರ್ ಗುರುಪ್ರಸಾದ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.