ಬಂಟ್ವಾಳ: ಬಾನೆತ್ತರದ ಗೋಡೆಗಳ ಮೇಲೆ, ಜಾರುವ ಬಂಡೆಗಳ ಮೇಲೆ ಲೀಲಾಜಾಲವಾಗಿ ಹತ್ತುವ ಮೂಲಕ ತನ್ನ ಕರಾಮತ್ತು ಪ್ರದರ್ಶಿಸುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲೂ ಕಟ್ಟಡವನ್ನು ಏರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾನೆ.
ಶನಿವಾರ ಬಿ.ಸಿರೋಡಿಗೆ ಆಗಮಿಸಿದ್ದ ಜ್ಯೋತಿ ರಾಜ್ ಖಾಸಗಿ ಸಂಸ್ಥೆಯೊಂದರ ಪ್ರಚಾರಾರ್ಥವಾಗಿ ಮಹಡಿಗಳನ್ನು ಏರುವ ಪ್ರದರ್ಶನ ನೀಡಿದ್ದ. ಸಂಜೆಯ ವೇಳೆಗೆ ಬಿ.ಸಿ.ರೋಡಿನ ಬಸ್ಸು ನಿಲ್ದಾಣದ ಬಳಿಯ ಆರು ಮಹಡಿಯ ಕಟ್ಟಡವೊಂದನ್ನು ಮೇಲೆರುವ ಸಿದ್ದತೆ ನಡೆಸಿದ್ದ. ಬಿ.ಸಿ.ರೋಡಿನ ಕೃಷ್ಣಾ ಹೆರಿಟೇಜ್ ಕಟ್ಟಡವನ್ನು ಕೋತಿರಾಜ್ ಹತ್ತುತ್ತಾರೆ ಎಂದು ಅದರಲ್ಲಿ ಘೋಷಿಸಲಾಯಿತು. ಅದನ್ನು ಅನುಸರಿಸಿ ನೂರಾರು ಮಂದಿ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಕೃಷ್ಣಾ ಹೆರಿಟೇಜ್ ಬಳಿ ಜಮಾಯಿಸಿದರು. ಕೋತಿರಾಜ್ ಅವರೂ ಕಟ್ಟಡವೇರಲು ಸಿದ್ಧರಾದರು. ಈ ಸಂದರ್ಭ ಹಲವರು ಮೊಬೈಲ್ ನಲ್ಲಿ ಅವರ ಸ್ಟಂಟ್ ನೋಡಿ ಸಂಗ್ರಹಿಸಿಡಲು ಕಾತರರಾಗಿದ್ದರು. ಆದರೆ ಕಟ್ಟಡದವರು ಕೋತಿರಾಜ್ ಹತ್ತಲು ಅನುಮತಿ ನಿರಾಕರಿಸಿದ ಕಾರಣ ಮತ್ತೆ ಬೇರೆ ಕಟ್ಟಡಗಳನ್ನು ಆಯೋಜಕರು ಹುಡುಕಿದರು. ಕೋತಿರಾಜ್ ಹೋದಲ್ಲಿ ಜನಸಮೂಹವೂ ಹೋಯಿತು. ಕೊನೆಗೆ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಕಟ್ಟಡವನ್ನು ಹತ್ತಲು ಅದರ ಮಾಲೀಕ ಸತೀಶ್ ರಾವ್ ಅನುಮತಿ ನೀಡಿದರು. ಕೇವಲ ಕೈ ಮತ್ತು ಕಾಲುಗಳನ್ನು ಬಳಸಿ ನೆಗೆಯುತ್ತ ಕ್ಷಣಾರ್ಧದಲ್ಲಿ ತುದಿಗೇರಿದ್ದ. ಜ್ಯೋತಿರಾಜ್ ಒಂದೊಂದೆ ಅಂತಸ್ತನ್ನು ಮೇಲೇರುತ್ತಿದ್ದಂತೆಯೆ ಜನರು ಕರತಾಡನದ ಮೂಲಕ ಅಭಿನಂದಿಸುವ ದೃಶ್ಯ ಕಂಡು ಬಂತು. ಕಟ್ಟಡದ ಕೆಳ ಭಾಗದಲ್ಲಿ ಜನರು ಕೋತಿರಾಜನ ಸಾಹಸದೃಶ್ಯವನ್ನು ನೋಡುವುದರ ಜೊತೆಗೆ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದರು. ಕೋತಿರಾಜನ ಸಾಹಸ ನೋಡುವ ಭರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಚತುಷ್ಪಥ ಮೇಲ್ಸೆತುವೆಯಲ್ಲಿ ಕೆಲಹೊತ್ತು ವಾಹನ ದಟ್ಟಣೆ ಉಂಟಾಯಿತು.
ಕಟ್ಟಡ ಇಳಿದ ಬಳಿಕ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳು ತಮ್ಮ ಮನೋಭಿಲಾಷೆ ಈಡೇರಿಸಿಕೊಂಡರು.