ಕಾಸರಗೋಡು: ಕೊಲೆ ಪ್ರಕರಣವೊಂದರ ಆರೋಪಿಯೋರ್ವನ ತಲೆ ಕತ್ತರಿಸಿ ಕೊಲೆಗೈದ ಘಟನೆಯೊಂದು ಆದಿತ್ಯವಾರ ಸಂಜೆ ಕುಂಬಳೆಯಲ್ಲಿ ನಡೆದಿದ್ದು, ತಲೆಯನ್ನು ಘಟನಾ ಸ್ಥಳದಿಂದ ಅಲ್ಪ ದೂರ ಎಸೆದು ಹಂತಕರು ಪರಾರಿಯಾಗಿದ್ದಾರೆ.
ಕೊಲೆಗೀಡಾದವನನ್ನು ಕುಂಬಳೆ ಪೆರುವಾಡ್ ನ ಅಬ್ದುಲ್ ಸಲಾಂ ( 32) ಎಂದು ಗುರುತಿಸಲಾಗಿದೆ. ಈತನ ಸಹಚರ ಬದ್ರಿಯಾ ನಗರದ ನೌಶಾದ್ ( 28) ಎಂಬಾತ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಮೇಲಂಗರ ಕೋಟೆ ಸಮೀಪದ ನಿರ್ಜನ ಸ್ಥಳದಲ್ಲಿ ಆದಿತ್ಯವಾರ ಸಂಜೆ ಮೃತದೇಹ ಪತ್ತೆಯಾಗಿದೆ. ತಲೆಯನ್ನು ಕಡಿದು ಬರ್ಬರವಾಗಿ ಕೊಲೆಮಾಡಲಾಗಿದೆ .
ಆದಿತ್ಯವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಅಬ್ದುಲ್ ಸಲಾಂ, ನೌಶಾದ್ ಸೇರಿದಂತೆ ನಾಲ್ವರನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ರಾತ್ರಿ ಸಂಚರಿಸುವ ವಾಹನಗಳನ್ನು ತಡೆದು ಬೆದರಿಸಿ ಹಣ ದರೋಡೆ ಮಾಡುತ್ತಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ವಿಚಾರಣೆ ಬಳಿಕ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ನಾಲ್ವರನ್ನು ಬಿಡುಗಡೆ ಮಾಡಲಾಗಿತ್ತು.
ಬಳಿಕ ಸಲಾಂನ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಸ್ಪರ ದ್ವೇಷ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ. 2014 ರಲ್ಲಿ ಕುಂಬಳೆ ಪೇರಾಲ್ ನ ಶಫೀಕ್ (25) ನನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಫೀಕ್ ನನ್ನು ಕೊಲೆಗೈದು ನಿರ್ಮಾಣ ಹಂತದಲ್ಲಿದ್ದ ಮನೆಯ ಸಮೀಪ ರಾಶಿ ಹಾಕಲಾಗಿದ್ದ ಮರಳಿನಲ್ಲಿ ಹೂತು ಹಾಕಿದ್ದ ಪ್ರಕರಣದಲ್ಲಿ ಸಲಾಂ ಆರೋಪಿಯಾಗಿದ್ದಾನೆ. ಇದಲ್ಲದೆ ಹೊಸದಾದ ಇನೋವಾ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲೂ ಈತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಮನೆಯೊಂದಕ್ಕೆ ನುಗ್ಗಿ ಅಬ್ದುಲ್ ಸಲಾಂ ನೇತೃತ್ವದ ತಂಡವು ದಾಂದಲೆ ನಡೆಸಿತ್ತು ಎನ್ನಲಾಗಿದೆ . ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭಿಸಿತ್ತು. ಘಟನಾ ಸ್ಥಳದಲ್ಲಿ ಒಂದು ಬೈಕ್ ಮಗುಚಿ ಹಾಕಿದ ಹಾಗೂ ಇನ್ನೊಂದು ಬೈಕ್ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿದ್ದು, ಸಮೀಪ ಒಂದು ಆಟೋ ರಿಕ್ಷಾ ಕೂಡಾ ಪತ್ತೆಯಾಗಿದೆ. ಮೇಲಂಗರ ಕೋಟೆಯ ಹಿತ್ತಿಲಿನಲ್ಲಿ ನಾಲ್ವರು ಮದ್ಯ ಸೇವಿಸುತ್ತಿದ್ದಾಗ ತಂಡವೊಂದು ದಾಳಿ ನಡೆಸಿರಬಹುದು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭಿಸಿದೆ. ಬಾಡಿಗೆ ಹಂತಕರ ಮೂಲಕ ಕೊಲೆ ನಡೆದಿರಬಹುದು ಎಂಬ ಸಂಶಯ ಉಂಟಾಗಿದೆ. ಇದಲ್ಲದೆ ಮರಳು ಮಾಫಿಯಾ ಕೈವಾಡದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಮರಳು ಸಾಗಾಟ ಗಾರರಿಗೆ ಬೆದರಿಸಿ ಹಣ ದರೋಡೆ ಮಾಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.