ಪುತ್ತೂರು: ಬೆಳ್ಳಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ನೆಟ್ಟಾರು ಮೊಗಪ್ಪೆ ಸರಕಾರಿ ಕೆರೆಯ ವಿಸ್ತೀರ್ಣವೇ 10 ಎಕ್ರೆಗೂ ಮಿಕ್ಕಿ..! ಅಂದರೆ ಇದರಲ್ಲಿ ಸಂಗ್ರಹಗೊಳ್ಳುವ ನೀರಿನ ಪ್ರಮಾಣ ಎಷ್ಟೆಂದೂ ಊಹಿಸಿಕೊಳ್ಳಬಹುದು. ನಾಲ್ಕೈದು ಗ್ರಾಮಗಳಿಗೆ ದಿನದ 24 ಗಂಟೆಯು ನೀರೋದಗಿಸುವ ಸಾಮಥ್ರ್ಯ ಹೊಂದಿರುವ ಈ ಕೆರೆಯ 75 ರಷ್ಟು ಭಾಗ ಹೂಳು ತುಂಬಿದೆ. ಜಲ ತುಂಬಿ ತುಳುಕುತ್ತಿದ್ದ ಶತಮಾನಗಳ ಇತಿಹಾಸ ಹೊಂದಿರುವ ಮೊಗಪ್ಪೆ ಕೆರೆಯ ಸದ್ಯದ ಕಥೆಯಿದು.!
ಜಲ ಕ್ಷಾಮದ ವಾಸ್ತವತೆ ನಗರದಿಂದ ಗ್ರಾಮದ ಮನೆಗಳಿಗೆ ಮುಟ್ಟಿದೆ. ಪರಿಣಾಮ ಜಲ ಉಳಿಸುವ ಮಹತ್ವ ಅರಿವಿಗೆ ಬರುತ್ತಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ಮೊಗಪ್ಪೆ ಕೆರೆಯಲ್ಲಿ ಜಲ ಇಂಗಿಸುವ, ಹತ್ತೂರಿಗೆ ಹರಿಸುವ, ಪ್ರವಾಸಿ ನೆಲೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ಚಿಂತನೆಗೆ ಜನರೇ ಮುಂದಾಗಿದ್ದಾರೆ.
ಜನಪ್ರತಿನಿಗಳು, ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸಮುದಾಯದ ನೇತಾರರು ಮತ್ತು ಸರಕಾರಿ ಇಲಾಖೆ ಸಹಯೋಗದಲ್ಲಿ ಈ ಬಾರಿ ಕೆರೆಯ ಹೂಳೆತ್ತಿ ಮುಂದಿನ ಬಾರಿ ಸದ್ಬಳಕೆಗೆ ಚಿಂತನೆ ರೂಪಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಕೆರೆ ವೀಕ್ಷಣೆ ನಡೆಸಲಾಗಿದೆ. ಸರಕಾರದ ಅನುದಾನಕ್ಕೆ ಕಾಯದೇ ಜಲ ಜಾಗೃತಿಯ ಕ್ರಾಂತಿಕಾರಿಕ ಅಭಿಯಾನಕ್ಕೆ ಮನಸ್ಸು ಮಾಡಿರುವುದು ಜಲ ಸಂರಕ್ಷಣೆಯ ಪಾಸಿಟಿವ್ ಹೆಜ್ಜೆ.
ಕೆರೆಯ ಇತಿಹಾಸ
ಮೊಗಪ್ಪೆ ಕೆರೆಗೆ ಶತಮಾನದ ಹಿನ್ನೆಲೆಯಿದೆ. ಬಹು ವರ್ಷಗಳ ಹಿಂದೆ ನೆಟ್ಟಾರು, ಬೆಳ್ಳಾರೆ, ಪೆರುವಾಜೆ ಗ್ರಾಮದ ಆಸುಪಾಸಿಗೆ ಇದೇ ಕೆರೆ ನೀರಿನ ಮೂಲ. ಕ್ರಮೇಣ ಬಾವಿ, ಕೆರೆ, ಕೊಳವೆ ಬಾವಿಯ ನೀರಿನ ಬಳಕೆ ಹೆಚ್ಚಾದಾಗೆ, ಕೆರೆ ನೀರು ಬಳಕೆ ನಿಂತಿತ್ತು. ಕೆರೆಯ ಮೇಲ್ಭಾಗದ ಗುಡ್ಡ ಪ್ರದೇಶದಿಂದ ಮಳೆ ನೀರಿನಲ್ಲಿ ಹರಿದು ಬಂದ ಮಣ್ಣು ಕೆರೆಗೆ ಸೇರಿ ಹೂಳು ತುಂಬಿದೆ. ಪಂಚಾಯತ್ ದಾಖಲೆಯಲ್ಲಿ 10.02 ಸೆಂಟ್ಸ್ನಲ್ಲಿ ಕೆರೆ ಪ್ರದೇಶ ದಾಖಲಾಗಿದ್ದರೂ ಹೂಳು ತುಂಬಿದ ಪರಿಣಾಮ ಅದು 5 ಎಕ್ರೆ ವ್ಯಾಪ್ತಿಗೆ ಸಂಕುಚಿತಗೊಂಡಿದೆ. ಕೆರೆ ಉಳಿದಿರುವ ಪ್ರದೇಶದ ಹೂಳು ತೆಗೆದರೆ, ಅದರಿಂದ ಕನಿಷ್ಟ ಹತ್ತೂರಿಗೆ ನೀರು ಹರಿಯಬಲ್ಲದು ಅನ್ನುತ್ತಾರೆ ಊರವರು.
ಯೋಜನೆ ಹೀಗಿದೆ
ಆರಂಭದಲ್ಲಿ 150 ಗಂಟೆ ಕಾಲ ಹೂಳೆತ್ತುವ ಯೋಜನೆ ಕೈಗೆತ್ತಿಗೊಳ್ಳಲಾಗಿದೆ. ಇಲ್ಲಿ ಸಂಘ ಸಂಸ್ಥೆಗಳಿಗೆ, ಆಸಕ್ತರಿಗೆ ಇಂತಿಷ್ಟು ಗಂಟೆಗೆ ಎಂದು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ ಸಂಘ ಸಂಸ್ಥೆ 2, ಇನ್ನೊಂದು ಸಂಸ್ಥೆ 5 ಗಂಟೆ ಹೀಗೆ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಹೂಳೆತ್ತುವ ಬಗ್ಗೆ ನೋಂದಣಿ ಮಾಡಿಕೊಳ್ಳಬಹುದು. ಆ ಗಂಟೆಯ ಖರ್ಚು-ವೆಚ್ಚ ಅವರದ್ದೆ. ನೋಂದಣಿ ಸಂಖ್ಯೆ ಹೆಚ್ಚಾದಂತೆ ಹೂಳೆತ್ತುವ ಗಂಟೆಯಲ್ಲೂ ಏರಿಕೆಯಾಗುತ್ತ ಹೋಗಲಿದೆ. ಈಗಾಗಲೇ ಹಲವಾರು ಮಂದಿ ಹೂಳೆತ್ತುವ ಕಾರ್ಯದಲ್ಲಿ ಕೈ ಜೋಡಿಸಲು ಮುಂದಾಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಹೂಳೆತ್ತುವ ಕಾರ್ಯಕ್ಕೆ 600 ರಿಂದ 750 ಗಂಟೆ ಬೇಕು.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೂಳೆತ್ತುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಗ್ರಾ.ಪಂ., ತಾ.ಪಂ., ಜಿ.ಪಂ, ಶಾಸಕ ಹಾಗೂ ಸಂಸದರ ನಿಗಳಿಂದ ಅನುದಾನ ಬಳಿಸಿ ತಡೆಗೋಡೆ, ಪ್ರವಾಸಿ ಕ್ಷೇತ್ರವನ್ನಾಗಿ ರೂಪಿಸಲಾಗುತ್ತದೆ. ಈ ಮೂಲಕ ಕೆರೆಗೆ ಪುನರ್ಜೀವನ್ ಕಲ್ಪಿಸುವ ಪ್ರಯತ್ನ ಇದರ ಉದ್ದೇಶ. ಕೆರೆ ಅಭಿವೃದ್ಧಿಗೆ ಸಂಬಂಸಿ ಗ್ರಾ.ಪಂ, ಜಿ.ಪಂ. ಹಾಗೂ ಸರಕಾರ ಅನುದಾನ ಬಳಕೆ ಆಗಿತ್ತು. ಆದರೂ ಹೊಳೆತ್ತದೆ ಅನುದಾನ ವ್ಯಯಿಸಿದರೂ, ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ನಾಲ್ಕು ವರ್ಷದ ಹಿಂದೆ ಈ ಕೆರೆ ಅಭಿವೃದ್ಧಿಗೆ 1 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಅದು ಬಳಕೆ ಆಗದೆ ಸರಕಾರಕ್ಕೆ ವಾಪಾಸಾಗಿತ್ತು ಅನ್ನುತ್ತದೆ ಅಂಕಿ-ಅಂಶ.