ಉಳ್ಳಾಲ: ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ತಲೆದೋರಿದ ಹಿನ್ನೆಲೆಯಲ್ಲಿ ನಾಗರಿಕರೊಬ್ಬರು ಪ್ರಧಾನ ಮಂತ್ರಿಯ ನಮೋ ಆ್ಯಪ್ ಗೆ ದೂರು ನೀಡಿದ ಪರಿಣಾಮವಾಗಿ ಅವರ ಕುಡಿಯುವ ನೀರಿಗೆ ತಾತ್ಕಾಲಿಕ ಪರಿಹಾರ ದೊರೆತಿದೆ.
ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜಂಗರೆ ಪಲ್ಲ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಉದ್ಭವಿಸಿತ್ತು. ಈ ಪೈಕಿ ಕಳೆದ ಮೂರು ವರ್ಷಗಳಿಂದ ಬಜಂಗೆರೆ ಪಲ್ಲ ಎಂಬಲ್ಲಿ ವಾಸವಾಗಿರುವ ಸೋಮನಾಥ ಗಟ್ಟಿ ಎಂಬವರು ಸ್ಥಳೀಯಾಡಳಿತ ಸಂಸ್ಥೆಗೆ ಮನವಿ ಮಾಡಿದ್ದರು. ಆದರೂ ಸೋಮನಾಥ ಅವರು ಸೇರಿದಂತೆ 15 ಮನೆಗಳಿಗೆ ನೀರಿನ ವ್ಯವಸ್ಥೆ ಆಗಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ತಲೆದೋರಿದ್ದರಿಂದಾಗಿ ಸ್ಥಳೀಯಾಡಳಿತಗಳಿಗೆ ಮನವಿ ಮಾಡಿ ಎರಡು ತಿಂಗಳುಗಳು ಕಳೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಅದಕ್ಕಾಗಿ ಅವರು ತಮ್ಮ ಅಳಿಯ ನಾಗೇಶ್ ಅವರ ಮಾರ್ಗದರ್ಶನದಂತೆ ನರೇಂದ್ರ ಮೋದಿಯ `ನಮೋ ಆ್ಯಪ್’ಗೆ ನೀರಿನ ಸಮಸ್ಯೆ ದೂರನ್ನು ಎಪ್ರಿಲ್ ತಿಂಗಳ ಪ್ರಥಮ ವಾರದಲ್ಲಿ ಅಪ್ಲೋಡ್ ಮಾಡಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ಸೋಮನಾಥ ಗಟ್ಟಿ ಅವರು ದೂರು ದಾಖಲಿಸಿದ ಎರಡೇ ವಾರದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಸ್ಪಂದಿಸಿದ್ದು, ಎ.21ರಂದು ತಲಪಾಡಿ ಗ್ರಾಮ ಪಂಚಾಯತ್ನಿಂದ ಸೋಮನಾಥ ಅವರಿಗೆ ಕರೆ ಬಂದಿತ್ತು. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಜಿಲ್ಲಾಡಳಿತಕ್ಕೆ ಸೋಮನಾಥ ಅವರಿಗೆ ನೀರು ಒದಗಿಸುವಂತೆ ನೀಡಿದ ಆದೇಶದಂತೆ ತಲಪಾಡಿ ಗ್ರಾಮ ಪಂಚಾಯತ್ನ ಸಿಬಂದಿಗಳು ಮನೆಗೆ ಸೋಮನಾಥ ಅವರ ಮನೆಗೆ ಆಗಮಿಸಿ ಪರಶೀಲನೆ ನಡೆಸಿದ್ದು ಬಳಿಕ ಟ್ಯಾಂಕರ್ನ ಮೂಲಕ ನೀರಿನ ಪೂರೈಕೆ ಪ್ರಾರಂಭಿಸಲಾಯಿತು.
ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ದೇವಿಪುರ ಬಜಂಗರೆ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆ ತುಂಬಾ ಇದೆ. ಮಳೆಗಾಲದಲ್ಲೂ ನೀರು ಸರಬರಾಜು ಆಗುವ ಪೈಪ್ ತುಂಡಾದರೆ 10ರಿಂದ 15 ದಿವಸದವರೆಗೆ ನೀರು ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ಸೋಮನಾಥ ಗಟ್ಟಿ. ನಾವು ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದು, ಬೇಸಿಗೆ ಪ್ರಾರಂಭವಾದರೆ ಟ್ಯಾಂಕರ್ನಲ್ಲಿ ನೀರು ತರಬೇಕಾಗುತ್ತದೆ. ಒಂದೆಡೆ ಟೋಲ್ಗೇಟ್ ಸಮಸ್ಯೆಯಿಂದ ನೀರು ಬರುವ ವಾಹನಕ್ಕೆ ಟೋಲ್ನ ಹಣ ಸೇರಿದಂತೆ 800ರಿಂದ 900ರೂ ಇರುವುದರಿಂದ ದುಡಿದ ಹಣವನ್ನು ನೀರಿಗಾಗಿ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ. ಈ ವ್ಯಾಪ್ತಿಯಲ್ಲಿ ಇರುವ ಹೆಚ್ಚಿನ ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವುದರಿಂದ ಸಾಲ ಮಾಡಿ ನೀರಿಗೆ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ವರ್ಷಗಳಿಂದ ಪಂಚಾಯತ್ ಒಂದು ಬಾರಿಯೂ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಿಲ್ಲ. ಈ ಪ್ರದೇಶದ ಜನರಿಗೆ ಸಹಕಾರಿಯಾಗಲಿ ಎಂದು ಪ್ರಧಾನ ಮಂತ್ರಿಯವರ ನಮೋ ಆ್ಯಪ್ಗೆ ದೂರು ನೀಡಿದ ಬಳಿಕ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಉತ್ತರ ಸಿಕ್ಕಿದ ಬಳಿಕ ಒಂದು ಬಾರಿ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಿದ್ದು, ಇಲ್ಲಿ ಶಾಶ್ವತ ಪರಿಹಾರಕ್ಕೆ ಜನಪ್ರತಿನಿ„ಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.